ಮಂಗಳೂರು: ಕರಾವಳಿಯ ಚಿತ್ರರಂಗದಲ್ಲಿ ಸತತ ಐದನೇ ಬಾರಿಗೆ ಅತಿ ದೊಡ್ಡ ಸಿನಿಗಾಲಾ ಕಾರ್ಯಕ್ರಮವೆನಿಸಿಕೊಂಡಿರುವ ‘ಸ್ಯಾಂಡಿಸ್ ಕಂಪೆನಿ’ ಅರ್ಪಿಸುವ ‘ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲಂ ಅವಾರ್ಡ್ಸ್ 2026’ ಮೇ 24ರಂದು ಸಂಜೆ 3 ಗಂಟೆಗೆ ಮುಲ್ಕಿಯ ಕೊಲ್ನಾಡ್‌ನ ಸುಂದರರಾಮ ಶೆಟ್ಟಿ ಕನ್ವೆನ್ಷನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಸ್ಯಾಂಡಿಸ್ ಕಂಪೆನಿಯ ಮಾಲಕರಾದ ಸಂದೇಶ್ ರಾಜ್ ಬಂಗೇರ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಸಂಗೀತ ನಿರ್ದೇಶಕ ಗುರುಕಿರಣ್ ನಿರ್ದೇಶಕ ತರುಣ್ ಸುಧೀರ್ , ನಟಿ ಸೋನಾಲ್ ಮಾಂತೆರೋ, ನಿರ್ಮಾಪಕಿ ಶಿಲ್ಪಾ ಗಣೇಶ್ ಹಾಗೂ ನಟ ತ್ರಿವಿಕ್ರಮ ಭಾಗವಹಿಸಲಿದ್ದಾರೆ.
ಇವರೊಂದಿಗೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಉಮಾನಾಥ್ ಎ.ಕೋಟ್ಯಾನ್, ಮೈಂಡ್ ಮೆಕ್ಯಾನಿಸಂ ಸಂಸ್ಥಾಪಕ ಶ್ರೀನಾಥ್ ಶೆಟ್ಟಿ, ಆಸ್ತ್ರ ಗ್ರೂಪ್ ಸಂಸ್ಥಾಪಕ ಲಂಚುಲಾಲ್ ಕೆ.ಎಸ್. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಸೇರಿದಂತೆ ತುಳು ಚಿತ್ರರಂಗದ ಕಲಾವಿದರು, ನಿರ್ಮಾಪಕರು ಮತ್ತು ತಂತ್ರಜ್ಞರು ಉಪಸ್ಥಿತರಿರಲಿದ್ದಾರೆ.
2025ರಲ್ಲಿ ಬಿಡುಗಡೆಯಾದ ಎಂಟು ಸಿನಿಮಾಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದು, ‘ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್’ ಹಾಗೂ ‘ವರ್ಸಟೈಲ್ ಆಕ್ಟರ್ ಅವಾರ್ಡ್’ ಸೇರಿದಂತೆ ಒಟ್ಟು 30 ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಚಿತ್ರರಂಗದಲ್ಲಿ ಅಪೂರ್ವ ಸಾಧನೆಗೈದ ದೇವದಾಸ್ ಕಾಪಿಕಾಡ್ ಹಾಗೂ ಸರೋಜಿನಿ ಶೆಟ್ಟಿ ಅವರಿಗೆ ವಿಶೇಷ ಸನ್ಮಾನ. ಜೊತೆಗೆ ತುಳು ಚಿತ್ರರಂಗದ ನಟ-ನಟಿಯರಿಂದ ನೃತ್ಯ ಕಾರ್ಯಕ್ರಮ, ‘ಸಿಸಿಲಿಂಗ್ ಗಾಯ್ಸ್’ ತಂಡದ ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮಗಳನ್ನು ವೀಕ್ಷಿಸಿದರು ರಂಜಿಸಲಿದೆ ಎಂದರು.
ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ, ನಿರೂಪಕರಾದ ಶರ್ಮಿಳಾ ಅಮೀನ್ ಮತ್ತು ವಿನೀತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸಚಿನ್ ಉಪ್ಪಿನಂಗಡಿ, ಸಾತ್ವಿಕ್ ಹಾಗೂ ಯಶ್ ರಾಜ್ ಉಪಸ್ಥಿತರಿದ್ದರು.