ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾದ ಘಟನೆ ಮಂಗಳೂರಿನ ಕೋಡಿಕಲ್ ಉರ್ವ ಪ್ರದೇಶದಲ್ಲಿ ನಡೆದಿದೆ.
ಉರ್ವ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಹನುಮಂತ ಕಂಟಿ ಹಾಗೂ ಹೋಮ್‌ಗಾರ್ಡ್ ಸಿಬ್ಬಂದಿಯೊಬ್ಬರು ಮೊನ್ನೆ ರಾತ್ರಿ ಸುಮಾರು 2 ಗಂಟೆಗೆ ಕೋಡಿಕಲ್‌ನ ನಾರಾಯಣ ಗುರು ಕೋ-ಆಪರೇಟಿವ್ ಸೊಸೈಟಿ ಬಳಿ ಗಸ್ತು ತಿರುಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರನ್ನು ತಪಾಸಣೆಗಾಗಿ ವಾಹನ ನಿಲ್ಲಿಸುವಂತೆ ಸೂಚಿಸಲಾಗಿದೆ.
ಆದರೆ, ದ್ವಿಚಕ್ರ ವಾಹನದ ಹಿಂಬದಿ ಕುಳಿತಿದ್ದ ವ್ಯಕ್ತಿ ಸಿಮೆಂಟ್ ಶೀಟ್ ತುಂಡಿನಂತಹ ವಸ್ತುವಿನಿಂದ ಕಾನ್ಸ್‌ಟೇಬಲ್ ಹನುಮಂತ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.
ಗಾಯಗೊಂಡ ಹನುಮಂತ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ನಡೆಸಿದ ದುಷ್ಕರ್ಮಿಗಳು ದ್ವಿಚಕ್ರ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.