ಜಾಗತಿಕ ಆರ್ಥಿಕ ಸಂಕಷ್ಟ ಎದುರಿಸಲು ಕೇಂದ್ರದ “ತುರ್ತು ದ್ರವ್ಯತೆ ಯೋಜನೆ” ಘೋಷಣೆ

MSME ಹಾಗೂ ವಿಮಾನಯಾನ ವಲಯಕ್ಕೆ ₹2.55 ಲಕ್ಷ ಕೋಟಿ ಹೆಚ್ಚುವರಿ ಸಾಲ ಹರಿವು ಗುರಿ

ಮಂಗಳೂರು: ಪಶ್ಚಿಮ ಏಷ್ಯಾದ ಸಂಘರ್ಷದಿಂದ ಉಂಟಾಗಿರುವ ಜಾಗತಿಕ ಆರ್ಥಿಕ ಸಂಕಷ್ಟದ ಪರಿಣಾಮವನ್ನು ತಗ್ಗಿಸಲು ಹಾಗೂ ಅಲ್ಪಾವಧಿಯ ದ್ರವ್ಯತೆ ಅಸಮತೋಲನವನ್ನು ಎದುರಿಸಲು ಕೇಂದ್ರ ಸರ್ಕಾರ “ತುರ್ತು ದ್ರವ್ಯತೆ ಯೋಜನೆ” (Emergency Credit) ಘೋಷಿಸಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕ ಸಿಎ ಎಸ್‌.ಎಸ್‌. ನಾಯಕ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, MSME ಹಾಗೂ MSME ಅಲ್ಲದ ಘಟಕಗಳು ಮತ್ತು ವಿಮಾನಯಾನ ವಲಯದ ಆರ್ಥಿಕ ಅಸ್ಥಿರತೆಯನ್ನು ಎದುರಿಸಲು ಸರ್ಕಾರ ಒಟ್ಟು ₹2.55 ಲಕ್ಷ ಕೋಟಿ ಹೆಚ್ಚುವರಿ ಸಾಲ ಹರಿವಿನ ಗುರಿ ಹೊಂದಿದೆ. ಇದರಲ್ಲಿ ವಿಮಾನಯಾನ ವಲಯಕ್ಕೆ ₹5,000 ಕೋಟಿ ಮೀಸಲಿಡಲಾಗಿದೆ ಎಂದು ವಿವರಿಸಿದರು.

“ECLGS 5.0” ಯೋಜನೆಗೆ ಕೇಂದ್ರದ ಬೆಂಬಲ

“ECLGS 5.0” (Emergency Credit Line Guarantee Scheme) ಯೋಜನೆ ಕೇಂದ್ರ ಸರ್ಕಾರದ ಬೆಂಬಲಿತ ಕ್ರೆಡಿಟ್ ಗ್ಯಾರಂಟಿ ಯೋಜನೆಯಾಗಿದ್ದು, ಹಣಕಾಸು ಸಚಿವಾಲಯದ ಅಧೀನದಲ್ಲಿರುವ National Credit Guarantee Trustee Company Limited ಇದರ ನಿರ್ವಹಣೆ ಮಾಡಲಿದೆ ಎಂದು ಹೇಳಿದರು.

ಈ ಯೋಜನೆಯಡಿ ಬ್ಯಾಂಕುಗಳು ಹಾಗೂ NBFCಗಳು ಅರ್ಹ ಸಾಲಗಾರರಿಗೆ ಯಾವುದೇ ಹೆಚ್ಚುವರಿ ಮೇಲಾಧಾರವಿಲ್ಲದೆ ಕಾರ್ಯನಿರತ ಬಂಡವಾಳ ಸಾಲ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಯೋಜನೆಗೆ ಯಾರು ಅರ್ಹರು?

ಮಾರ್ಚ್ 31, 2026ರ ವೇಳೆಗೆ ಕಾರ್ಯನಿರತ ಬಂಡವಾಳ ಮಿತಿಯನ್ನು ಹೊಂದಿರುವ MSME ಹಾಗೂ MSME ಅಲ್ಲದ ಘಟಕಗಳು ಮತ್ತು ಬಾಕಿ ಸಾಲ ಸೌಲಭ್ಯ ಹೊಂದಿರುವ ನಿಗದಿತ ಪ್ರಯಾಣಿಕ ವಿಮಾನಯಾನ ಸಂಸ್ಥೆಗಳು ಯೋಜನೆಗೆ ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.

31-03-2026ರ ವೇಳೆಗೆ ಬ್ಯಾಂಕ್ ಖಾತೆಗಳು “ಸ್ಟ್ಯಾಂಡರ್ಡ್” ವರ್ಗದಲ್ಲಿರಬೇಕು. SMA ಅಥವಾ NPA ವರ್ಗಕ್ಕೆ ಸೇರಿದ ಖಾತೆಗಳು ಯೋಜನೆಗೆ ಅರ್ಹವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಡ್ಡಿದರ ಮತ್ತು ಮರುಪಾವತಿ ಅವಧಿ

2026ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬಳಸಲಾದ ಗರಿಷ್ಠ ಕಾರ್ಯನಿರತ ಬಂಡವಾಳದ 20 ಶೇಕಡಾವರೆಗೆ ಹೆಚ್ಚುವರಿ ಸಾಲ ನೀಡಲಾಗುತ್ತದೆ. ಇದರ ಗರಿಷ್ಠ ಮಿತಿ ₹100 ಕೋಟಿ ಆಗಿರುತ್ತದೆ ಎಂದು ಹೇಳಿದರು.

MSMEಗಳಿಗೆ EBLR + 0.75 ಶೇಕಡಾ (ಗರಿಷ್ಠ 9%) ಹಾಗೂ NBFCಗಳ ಮೂಲಕ ಗರಿಷ್ಠ 13% ಬಡ್ಡಿದರ ಅನ್ವಯವಾಗಲಿದೆ. MSME ಅಲ್ಲದ ಘಟಕಗಳಿಗೆ MCLR + 0.75 ಶೇಕಡಾ (ಗರಿಷ್ಠ 9%) ಬಡ್ಡಿದರ ನಿಗದಿಯಾಗಿದೆ ಎಂದು ತಿಳಿಸಿದರು.

MSME ಹಾಗೂ MSME ಅಲ್ಲದ ಘಟಕಗಳಿಗೆ 5 ವರ್ಷಗಳ ಮರುಪಾವತಿ ಅವಧಿ ನೀಡಲಾಗಿದ್ದು, ಇದರಲ್ಲಿ 1 ವರ್ಷದ ಮೋರಟೋರಿಯಂ ಅವಧಿಯೂ ಸೇರಿದೆ. ವಿಮಾನಯಾನ ವಲಯಕ್ಕೆ 7 ವರ್ಷಗಳ ಮರುಪಾವತಿ ಅವಧಿ ಹಾಗೂ 2 ವರ್ಷಗಳ ಮೋರಟೋರಿಯಂ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಉದ್ಯೋಗ ರಕ್ಷಣೆಗೂ ನೆರವು

31-03-2027ರವರೆಗೆ ಮಂಜೂರು ಮಾಡಲಾದ ಎಲ್ಲಾ ಸಾಲಗಳಿಗೆ ಯೋಜನೆ ಅನ್ವಯವಾಗಲಿದ್ದು, MSME ಹಾಗೂ ನಾಗರಿಕ ವಿಮಾನಯಾನ ವಲಯದಲ್ಲಿ ಉದ್ಯೋಗ ರಕ್ಷಣೆ, ರಫ್ತು ಆಧಾರಿತ ಪ್ರದೇಶಗಳಲ್ಲಿ ಉದ್ಯೋಗ ನಷ್ಟ ತಡೆ ಹಾಗೂ ದೇಶೀಯ ಪೂರೈಕೆ ಸರಪಳಿ ಸ್ಥಿರತೆ ಕಾಪಾಡಲು ಈ ಯೋಜನೆ ನೆರವಾಗಲಿದೆ ಎಂದು ಸಿಎ ಎಸ್‌.ಎಸ್‌. ನಾಯಕ್ ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಹ ಸಂಚಾಲಕರಾದ ಜಿ. ಯೋಗೀಶ್ ಪೈ, ಸದಸ್ಯರಾದ ರಾಜೇಶ್ ರಾವ್ ಎಂ., ವಸಂತ ಶೆಟ್ಟಿ, ಡಾ. ಎಸ್‌.ಎಂ. ಶಿವಪ್ರಕಾಶ್ ಹಾಗೂ ರಘುನಾಥ್ ಪೈ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!