ಮಂಜೇಶ್ವರ, ಜೂನ್ 2: ಮಹಿಳೆಯೊಬ್ಬರ ಖಾಸಗಿ ಫೋಟೋವನ್ನು ದುರ್ಬಳಕೆ ಮಾಡಿಕೊಂಡು, ಆಕೆಯ ಪತಿ ಹಾಗೂ ಮಗುವಿಗೆ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಯುವಕನ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಆರೋಪಿಯನ್ನು ಕುಂಜತ್ತೂರಿನ ಇಬ್ರಾಹಿಂ ಖಲೀಲ್ (32) ಎಂದು ಗುರುತಿಸಲಾಗಿದೆ.
ಪೊಲೀಸ್ ದೂರಿನ ಪ್ರಕಾರ, ಆರೋಪಿಯು ದೂರುದಾರಳಾದ 37 ವರ್ಷದ ಮಹಿಳೆಯೊಂದಿಗೆ ನಿಂತಿರುವ ಫೋಟೋವನ್ನು ಆಕೆಯ ಪತಿಯ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆಗಳಿಗೆ ಕಳುಹಿಸಿದ್ದಾನೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸುವ ಪ್ರಯತ್ನ ನಡೆಸಿದ್ದಾನೆ ಎನ್ನಲಾಗಿದೆ.
ಇದರ ಜೊತೆಗೆ ಮಹಿಳೆಯ ಪತಿ ಮತ್ತು ಮಗುವನ್ನು ಕೊಲ್ಲುವುದಾಗಿ ದೂರವಾಣಿ ಮೂಲಕ ಬೆದರಿಕೆ ಒಡ್ಡಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೇ 29 ಮತ್ತು 30ರ ನಡುವೆ ಈ ಘಟನೆ ನಡೆದಿದ್ದು, ಸಂತ್ರಸ್ತೆಯ ದೂರಿನ ಮೇರೆಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.