ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಪ್ರತ್ಯೇಕ ರೈಲು ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕೇವಲ ಎರಡು ಗಂಟೆಗಳ ಅಂತರದಲ್ಲಿ ಈ ಎರಡು ದುರ್ಘಟನೆಗಳು ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮಂಗಳವಾರ ಸಂಜೆ ಸುಮಾರು 6:30ರ ಸುಮಾರಿಗೆ ಮೊಗ್ರಾಲ್ ನಿವಾಸಿ ಉಮೇಶನ್ ಎಂಬವರು ರೈಲು ಹಳಿಗಳ ಬಳಿ ಬಂದು, ರೈಲಿನ ಎದುರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅದೇ ರೀತಿ, ರಾತ್ರಿ 8:50ರ ಸುಮಾರಿಗೆ ಮಂಜೇಶ್ವರ ಕೀರ್ತೇಶ್ವರ ನಿವಾಸಿ, 22 ವರ್ಷದ ಮನೀಶ್ ಎಂಬವರು ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿದೆ. ಭಿನ್ನಚೇತನರಾಗಿದ್ದ ಮನೀಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೃತದೇಹಗಳನ್ನು ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಮಂಜೇಶ್ವರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ