ಕಾರವಾರದಲ್ಲಿ ಹಳೆಯ ಸೇತುವೆ ಕುಸಿತ

ಕಡವಾಡ-ಸುಂಕೇರಿ ಸಂಪರ್ಕ ಸೇತುವೆ ಧರೆಗೆ; ಅದೃಷ್ಟವಶಾತ್ ಜೀವಹಾನಿ ಇಲ್ಲ

ಕಾರವಾರ, ಜೂನ್ 10: ಮುಂಗಾರು ಮಳೆಯ ಆರಂಭದಲ್ಲೇ ಕಾರವಾರ ತಾಲ್ಲೂಕಿನ ಕಡವಾಡ ಪ್ರದೇಶದಲ್ಲಿರುವ ಹಳೆಯ ಸೇತುವೆಯೊಂದು ಮಂಗಳವಾರ ಏಕಾಏಕಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಅಥವಾ ಗಾಯಗಳ ಪ್ರಕರಣ ವರದಿಯಾಗಿಲ್ಲ.

ಕಡವಾಡದಿಂದ ಸುಂಕೇರಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಈ ಸೇತುವೆ ಹಲವು ದಶಕಗಳಷ್ಟು ಹಳೆಯದಾಗಿದ್ದು, ನಿರಂತರ ಮಳೆ ಹಾಗೂ ಕಾಲದ ಹೊಡೆತದಿಂದ ದುರ್ಬಲಗೊಂಡಿದ್ದ ಪರಿಣಾಮ ಕುಸಿತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸೇತುವೆಯ ಕೆಲವು ಭಾಗಗಳು ಒಡೆದು ಎರಡು-ಮೂರು ತುಂಡುಗಳಾಗಿ ಬಿದ್ದಿರುವುದು ಕಂಡುಬಂದಿದೆ.

ಸ್ಥಳೀಯ ನಿವಾಸಿಗಳು, ಮೀನುಗಾರರು ಹಾಗೂ ಸಾರ್ವಜನಿಕರು ಈ ಮಾರ್ಗವನ್ನು ಬಳಸುತ್ತಿದ್ದರೂ, ಘಟನೆ ನಡೆದ ವೇಳೆ ಸೇತುವೆಯ ಮೇಲೆ ಯಾವುದೇ ವಾಹನ ಅಥವಾ ಜನ ಸಂಚಾರ ಇರಲಿಲ್ಲ. ಇದರಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಕಡವಾಡ ಸೇತುವೆಯ ಪಕ್ಕದಲ್ಲೇ ಈಗಾಗಲೇ ಹೊಸ ಸೇತುವೆ ನಿರ್ಮಾಣಗೊಂಡಿರುವುದರಿಂದ ಹೆಚ್ಚಿನ ಸಂಚಾರ ಹೊಸ ಸೇತುವೆಯ ಮೂಲಕವೇ ನಡೆಯುತ್ತಿತ್ತು. ಹೀಗಾಗಿ ಹಳೆಯ ಸೇತುವೆ ಕುಸಿದರೂ ಸಂಚಾರ ವ್ಯವಸ್ಥೆಗೆ ಹೆಚ್ಚಿನ ಅಡಚಣೆ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಸೇತುವೆ ಕುಸಿತದ ನಿಖರ ಕಾರಣ ತಿಳಿಯಲು ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!