ಮಂಗಳೂರು:ಕೇಂದ್ರ ಸರ್ಕಾರದ ಇತ್ತೀಚಿನ ಗ್ಯಾಸ್, ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಿಂದ ಜನಸಾಮಾನ್ಯರ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಬೆಲೆ ಏರಿಕೆಯ ಹೊರೆ ನೇರವಾಗಿ ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಬಿದ್ದಿದೆ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದ್ದರೂ ಅದರ ಪ್ರಯೋಜನವನ್ನು ಕೇಂದ್ರ ಸರ್ಕಾರ ಜನರಿಗೆ ತಲುಪಿಸುತ್ತಿಲ್ಲ ಎಂದು ಟೀಕಿಸಿದರು. ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದ ಸಂದರ್ಭದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಹಲವು ಬಾರಿ ಹೆಚ್ಚಿಸಲಾಗಿತ್ತು. ಆದರೆ ಈಗ ಬೆಲೆ ಇಳಿಕೆಯಾಗಿದ್ದರೂ ಇಂಧನ ದರ ಕಡಿತಗೊಳಿಸಲು ಸರ್ಕಾರ ಮುಂದಾಗಿಲ್ಲ ಎಂದು ಹೇಳಿದರು.
ಇಂಧನ ಹಾಗೂ ವಾಣಿಜ್ಯ ಬಳಕೆಯ ಗ್ಯಾಸ್ ದರ ಏರಿಕೆಯಿಂದ ಹೋಟೆಲ್ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿದ್ದು, ಚಹಾ, ಕಾಫಿ ಸೇರಿದಂತೆ ದೈನಂದಿನ ಬಳಕೆಯ ವಸ್ತುಗಳ ಬೆಲೆಗಳು ಗಣನೀಯವಾಗಿ ಏರಿಕೆ ಕಂಡಿವೆ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದ್ದರೂ ರಾಜ್ಯಕ್ಕೆ ನ್ಯಾಯಯುತ ಪಾಲು ದೊರೆಯುತ್ತಿಲ್ಲ. ರಾಜ್ಯದ ಹಿತಾಸಕ್ತಿಯ ವಿಚಾರದಲ್ಲಿ ಸಂಸದರು ಧ್ವನಿ ಎತ್ತದಿರುವುದು ಖೇದಕರ ಸಂಗತಿ ಎಂದು ಅವರು ಆರೋಪಿಸಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆಸರೆಯಾಗಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳೊಳಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ತನ್ನ ಬದ್ಧತೆಯನ್ನು ಸಾಬೀತುಪಡಿಸಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಗಮನಹರಿಸಿ ಇಂಧನ ಹಾಗೂ ಗ್ಯಾಸ್ ದರಗಳನ್ನು ಕಡಿತಗೊಳಿಸುವ ಮೂಲಕ ಬೆಲೆ ಏರಿಕೆಯ ಹೊರೆ ತಗ್ಗಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ಶುಭೋದಯ ಆಳ್ವ, ಅಪ್ಪಿ, ಶಾಹುಲ್ ಹಮೀದ್, ಪ್ರಕಾಶ್ ಸಾಲಿಯಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.