ಅಂಗವೈಕಲ್ಯ ಹಕ್ಕುಗಳ ಕುರಿತು ‘ಡಿಎನ್‌ಎ ಕರಾವಳಿ ಧ್ವನಿ’ ಜಾಗೃತಿ ಕಾರ್ಯಕ್ರಮ ಜೂನ್ 23ರಂದು

ಮಂಗಳೂರು,: ಅಂಗವೈಕಲ್ಯ ಹಕ್ಕುಗಳು, ಸಮಗ್ರ ಅಭಿವೃದ್ಧಿ ಹಾಗೂ ಸಮಾಜದ ಭಾಗವಹಿಸುವಿಕೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ “ಡಿಎನ್‌ಎ ಕರಾವಳಿ ಧ್ವನಿ” ಎಂಬ ಒಂದು ದಿನದ ಜಾಗೃತಿ ಮತ್ತು ಸಂವಾದ ಕಾರ್ಯಕ್ರಮವು ಜೂನ್ 23ರಂದು ಮಂಗಳೂರಿನ ಕದ್ರಿಯ ಸರ್ಕ್ಯೂಟ್ ಹೌಸ್ ಸಮೀಪದ ಲಯನ್ಸ್ ಅಶೋಕ ಸೇವಾ ಭವನದಲ್ಲಿ ನಡೆಯಲಿದೆ ಎಂದು ಅರಿವು ಅರ್ಲಿ ಇಂಟರ್ವೆನ್ಷನ್ ಸೆಂಟರ್‌ನ ಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಭಟ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಮೂಲದ ಡಿಸೆಬಿಲಿಟಿ ಎನ್‌ಜಿಒ ಅಲಯನ್ಸ್ (DNA), ಮಾಯಾ – ಪೇರೆಂಟ್ಸ್ ಫಾರ್ ಇನ್‌ಕ್ಲೂಸಿವ್ ಡೆವಲಪ್‌ಮೆಂಟ್, ಅರಿವು ಅರ್ಲಿ ಇಂಟರ್ವೆನ್ಷನ್ ಸೆಂಟರ್, ಲಯನ್ಸ್ ಕ್ಲಬ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಅಶೋಕನಗರದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್ ಉದ್ಘಾಟಿಸಲಿದ್ದು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಲಯನ್ಸ್ ಕ್ಲಬ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಾ. ನವೀನ್ ಶೆಟ್ಟಿ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಆರೋಗ್ಯ, ಶಿಕ್ಷಣ, ಅಂಗವೈಕಲ್ಯ ಕಲ್ಯಾಣ, ಮಕ್ಕಳ ಅಭಿವೃದ್ಧಿ, ಆಡಳಿತ ಮತ್ತು ಸಮಾಜಸೇವಾ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲಯನ್ಸ್ ಜಿಲ್ಲೆ 317D ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ, ಲಯನ್ಸ್ ಕ್ಲಬ್ ಮಂಗಳೂರು ಅಶೋಕನಗರ ಅಧ್ಯಕ್ಷ ಪ್ರಶಾಂತ್ ಬಿ. ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.

ಅಂಗವೈಕಲ್ಯ ಹಕ್ಕುಗಳು, ಮಕ್ಕಳಲ್ಲಿ ಶೀಘ್ರ ಗುರುತಿಸುವಿಕೆ ಮತ್ತು ಮಧ್ಯಸ್ಥಿಕೆ, ಸಮಗ್ರ ಶಿಕ್ಷಣ, ಆರೋಗ್ಯ ಸೇವೆಗಳ ಲಭ್ಯತೆ ಹಾಗೂ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಕುರಿತಾಗಿ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಪೋಷಕರು, ಶಿಕ್ಷಕರು, ವೈದ್ಯರು, ಸಮಾಜಸೇವಕರು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಪೂರ್ಣಿಮಾ ಭಟ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ನವೀನ್ ಶೆಟ್ಟಿ ಕೆ., ಸಂಘಟನೆಯ ಪ್ರಮುಖರಾದ ಡಾ. ಶೀತಲ್ ಉಳ್ಳಾಲ್, ಪ್ರಶಾಂತ್, ವಸಂತ್, ನಾರಾಯಣ್ ಹಾಗೂ ಚರಣ್ ಆಳ್ವ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!