ಮಂಜೇಶ್ವರ, ಜು. 2: ಮಂಜೇಶ್ವರದ ಹೊಸಂಗಡಿ–ಆನಪಳ್ಳ ರಸ್ತೆಯ ಕಡಂಬಾರಿನ ಅರಣ್ಯ ಪ್ರದೇಶದಲ್ಲಿ ಬೃಹತ್ ಮರವೊಂದು ರಸ್ತೆಗೆ ಧರೆಗುರುಳಿದ ಪರಿಣಾಮ ವಿದ್ಯುತ್ ಲೈನ್ ಕಡಿತಗೊಂಡು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಎಸ್‌ಡಿಪಿಐ ಮಂಜೇಶ್ವರ ಪಂಚಾಯತ್ ರೆಸ್ಕ್ಯೂ ತಂಡ ತಕ್ಷಣ ಕಾರ್ಯಾಚರಣೆ ಆರಂಭಿಸಿತು. ತೀವ್ರ ಪರಿಶ್ರಮದ ಬಳಿಕ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಸುಗಮಗೊಳಿಸಲಾಯಿತು.




ರಕ್ಷಣಾ ಕಾರ್ಯಾಚರಣೆಯ ನೇತೃತ್ವವನ್ನು ಎಸ್‌ಡಿಪಿಐ ಮಂಜೇಶ್ವರ ಪಂಚಾಯತ್ ಸಮಿತಿ ಉಪಾಧ್ಯಕ್ಷ ಸಲಾಮ್ ಮಂಜೇಶ್ವರ ವಹಿಸಿದ್ದರು. ಸಕರಿಯ ಉದ್ಯಾವರ, ಅಶ್ಫಾಕ್ ಗುಡಕೇರಿ, ರಶೀದ್ ಗಾಂಧಿನಗರ ಹಾಗೂ ಅಜೀಜ್ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಮರ ತೆರವು ಕಾರ್ಯ ಯಶಸ್ವಿಗೊಳಿಸಿದರು.
ಸ್ಥಳೀಯರು ರಕ್ಷಣಾ ತಂಡದ ತ್ವರಿತ ಸ್ಪಂದನೆ ಮತ್ತು ಸೇವಾ ಮನೋಭಾವವನ್ನು ಶ್ಲಾಘಿಸಿದರು.


