ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಕಳ್ಳತನ: 10 ಪವನ್ ಚಿನ್ನ ದೋಚಿದ ಕಳ್ಳರು

​ಮಂಜೇಶ್ವರ: ಕುಟುಂಬದವರು ಮಸೀದಿಗೆ ತೆರಳಿದ್ದ ಒಂದು ಗಂಟೆಯ ಅಂತರದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು 10 ಪವನ್ ಚಿನ್ನಾಭರಣಗಳನ್ನು ದೋಚಿರುವ ಘಟನೆ ಪೈವಳಿಕೆ ಪಂಚಾಯತ್‌ನ ಕೈಯಾರಿನಲ್ಲಿ ನಡೆದಿದೆ.
​ಪಾಲಕ್ಕಾಡ್ ಮೂಲದ ಹೋಟೆಲ್ ಉದ್ಯಮಿ ಯೂಸುಫ್ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.

ಭಾನುವಾರ ರಾತ್ರಿ ಯೂಸುಫ್ ಅವರ ಪತ್ನಿ ಮೈಮೂನಾ ಮತ್ತು ಮಕ್ಕಳು ಸ್ಥಳೀಯ ಕೈಯಾರ್ ಮಸೀದಿಯಲ್ಲಿ ನಡೆಯುತ್ತಿದ್ದ ‘ಸ್ವಲಾತ್’ ಕಾರ್ಯಕ್ರಮಕ್ಕೆಂದು ತೆರಳಿದ್ದರು. ಕಾರ್ಯಕ್ರಮ ಮುಗಿಸಿ ರಾತ್ರಿ ಎಂಟೂವರೆ ಗಂಟೆ ಸುಮಾರಿಗೆ ಮನೆಗೆ ವಾಪಸಾದಾಗ, ಮನೆಯ ಒಳಭಾಗದಲ್ಲಿ ಅಸ್ತವ್ಯಸ್ತವಾಗಿರುವುದನ್ನು ಕಂಡು ಅವರು ಬೆಚ್ಚಿಬಿದ್ದಿದ್ದಾರೆ.

​ಮನೆಯ ಮಲಗುವ ಕೋಣೆಯಲ್ಲಿದ್ದ ಅಲ್ಮೇರಾಗಳನ್ನು ಬಲವಂತವಾಗಿ ತೆರೆದು, ಅದರಲ್ಲಿಟ್ಟಿದ್ದ 10 ಪವನ್ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ.

ಮನೆಯ ಹಿಂಭಾಗದ ಟೆರೇಸ್ ಮೂಲಕ ಮೇಲೇರಿದ ಕಳ್ಳರು, ಏಣಿ ಕೋಣೆಯ ಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ. ಕೋಣೆಯಲ್ಲಿದ್ದ ಬೀಗದ ಕೈಯನ್ನು ಬಳಸಿ ಅಲ್ಮೇರಾವನ್ನು ಸುಲಭವಾಗಿ ತೆರೆದಿರುವುದು ಕಳ್ಳರಿಗೆ ಮನೆಯ ಒಳಗಿನ ವ್ಯವಸ್ಥೆಯ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಇತ್ತೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

​ಘಟನಾ ಸ್ಥಳಕ್ಕೆ ಕುಂಬಳೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫೋರೆನ್ಸಿಕ್ ತಜ್ಞರು ಮತ್ತು ಶ್ವಾನದಳದ ಸಹಾಯದಿಂದ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!