ಖಾಸಗಿ ಬಸ್ಸುಗಳ ಟೈಮಿಂಗ್ಸ್ ವಿಚಾರದಲ್ಲಿ ಉಂಟಾದ ವಾಗ್ವಾದ ಹಾಡಹಗಲೇ ಕಬ್ಬಿಣದ ರಾಡ್‍ನೊಂದಿಗೆ ಪ್ರಯಾಣಿಕರ ಸಮ್ಮುಖದಲ್ಲೇ ಮಾರಾಮಾರಿ ನಡೆಸಿದ ಇಬ್ಬರು ಬಸ್ ಕಂಡಕ್ಟರ್ ಮೇಲೆ ಉಪ್ಪಿನಂಗಡಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರು-ಉಪ್ಪಿನಂಗಡಿ ಮಧ್ಯೆ ಸಂಚರಿಸುವ ಅರಫಾ ಬಸ್ ನ ಕಂಡಕ್ಟರ್ ನೌಶಾದ್ ಹಾಗೂ ಅದೇ ಮಾರ್ಗದಲ್ಲಿ ಸಂಚರಿಸುವ ‘ಲಕ್ಷ್ಮೀ’ ಬಸ್ ನ ಕಂಡಕ್ಟರ್ ಖಲಂದರ ಯಾನೆ ಶಾಹೀದ್ ಎಂಬುವವರ ನಡುವೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಬಸ್ ಟೈಮಿಂಗ್ಸ್ ವಿಚಾರವಾಗಿ ಪರಸ್ಪರ ಜಗಳ ನಡೆದಿದೆ

ಅಲ್ಲದೇ ಬಸ್ ನಿಲ್ದಾಣದಲ್ಲಿದ್ದ ಲಕ್ಷ್ಮೀ ಬಸ್ಸಿನೊಳಗೆ ಪ್ರಯಾಣಿಕರು ಕುಳಿತಿದ್ದಾಗ ನೌಶಾದ್ ಎಂಬಾತ ಏಕಾಏಕಿ ಬಸ್ಸಿನೊಳಗೆ ಪ್ರವೇಶಿಸಿ, ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಖಲಂದರ್ ಯಾನೆ ಶಾಹಿದ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಶಾಹಿದ್ ಕೂಡ ನೌಶಾದ್ ಮೇಲೆ ಕೈಯಿಂದ ಹಲ್ಲೆ ಮಾಡಿದ ಪರಿಣಾಮವಾಗಿ ಶಾಹಿದ್ ಮತ್ತು ನೌಶಾದ್‌ಗೆ ರಕ್ತಗಾಯವಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಶಾಹಿದ್ ಮತ್ತು ನೌಶಾದ್ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಈ ಇಬ್ಬರೂ ವ್ಯಕ್ತಿಗಳು ಸಾರ್ವಜನಿಕ ಸ್ಥಳವಾದ ಬಸ್ ನಿಲ್ದಾಣದಲ್ಲಿ, ಸಾರ್ವಜನಿಕರ ಎದುರೇ ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕ ನೆಮ್ಮದಿ ಮತ್ತು ಶಾಂತಿಗೆ ಭಂಗ ತಂದಿದ್ದಾರೆ.

ಅಲ್ಲದೇ ಪ್ರಯಾಣಿಕರ ಜೀವಕ್ಕೂ ಆತಂಕ ಉಂಟುಮಾಡಿದ್ದಾರೆ. ಆದ್ದರಿಂದ ಸಾರ್ವಜನಿಕ ಶಾಂತಿ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಕಾರಣ, ಇಬ್ಬರ ಮೇಲೂ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ: 102/2026 ಕಲಂ:115(2),118(1),194,3(5) BNS ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.



