ಉಪ್ಪಳ : ಜೋಡುಕಲ್ಲುವಿನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮನೆಯಂಗಳದಲ್ಲಿ ಆಟವಾಡುತ್ತಿದ್ದ ಗುರುಪ್ರಸಾದ್ ಮತ್ತು ತುಳಸಿ ದಂಪತಿಗಳ ಒಂದೂವರೆ ವರ್ಷದ ಪುತ್ರ ರಿತುರಾಜ್ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ಮಾಡಿದೆ.
ಶನಿವಾರ ಮಧ್ಯಾಹ್ನ ತಾಯಿ ಸಮೀಪದಲ್ಲೇ ಬಟ್ಟೆ ಒಗೆಯುತ್ತಿದ್ದಾಗ, ಅನಿರೀಕ್ಷಿತವಾಗಿ ಬಂದ ನಾಯಿ ಮಗುವನ್ನು ಕಚ್ಚಿ ಎಳೆದಾಡಿದೆ.

ಮಗುವಿನ ಚೀರಾಟ ಕೇಳಿ ತಾಯಿ ಕೂಡಲೇ ಓಡಿಬಂದಾಗ ನಾಯಿ ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


