‘ಮಿಥ್ಯ’ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿ: ಪತ್ರಿಕಾಗೋಷ್ಠಿಯಲ್ಲಿ ಕಲಾ ಪಯಣ ಹಂಚಿಕೊಂಡ ರೂಪಶ್ರೀ ವರ್ಕಾಡಿ

ಮಂಗಳೂರು:72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ರಕ್ಷಿತ್ ಶೆಟ್ಟಿ ನಿರ್ಮಾಣದ ಹಾಗೂ ಸುಮಂತ್ ಭಟ್ ನಿರ್ದೇಶನದ ‘ಮಿಥ್ಯ’ ಕನ್ನಡ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿರುವ ಕರಾವಳಿಯ ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ನಟಿ ರೂಪಶ್ರೀ ವರ್ಕಾಡಿ ಅವರು ತಮ್ಮ ಕಲಾ ಪಯಣ, ರಾಷ್ಟ್ರ ಪ್ರಶಸ್ತಿ ಹಾಗೂ ಚಿತ್ರರಂಗದ ಅನುಭವಗಳನ್ನು ನಗರದ ಪತ್ರಿಕಾಭವನದಲ್ಲಿ ನಡೆದ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಹರೀಶ್ ಹಾಗೂ ದಿವಂಗತ ಹೇಮಾವತಿ ದಂಪತಿಯ ಪುತ್ರಿಯಾಗಿ ಜನಿಸಿದ ತಾವು, ರಂಗ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ‘ಸಂಸಾರ ದ ಸರ್ಕಸ್’ ನಾಟಕದ ಮೂಲಕ ವೃತ್ತಿಪರ ರಂಗಭೂಮಿಗೆ ಪಾದಾರ್ಪಣೆ ಮಾಡಿದ್ದಾಗಿ ತಿಳಿಸಿದರು.

ಕಳೆದ ಎರಡೂವರೆ ದಶಕಗಳಿಗೂ ಅಧಿಕ ಕಲಾ ಜೀವನದಲ್ಲಿ ಕನ್ನಡ ಹಾಗೂ ತುಳು ಭಾಷೆಗಳ 700ಕ್ಕೂ ಹೆಚ್ಚು ನಾಟಕಗಳಲ್ಲಿ ಸುಮಾರು 4,000ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿರುವುದಾಗಿ ಅವರು ಹೇಳಿದರು. ಶಾರದಾ ಕಲಾ ಆರ್ಟ್ಸ್ ಹೊಸಂಗಡಿ, ಯುಗಪುರುಷ ಕಿನ್ನಿಗೋಳಿ, ರಂಗತರಂಗ ಕಾಪು ಸೇರಿದಂತೆ ಹಲವು ಪ್ರಮುಖ ರಂಗತಂಡಗಳಲ್ಲಿ ಅಭಿನಯಿಸಿದ್ದು, ಕೆ.ಎನ್. ಟೈಲರ್, ಜಗದೀಶ್ ಶೆಟ್ಟಿ ಕೆಂಚನಕೆರೆ, ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ರಮಾ ಬಿ.ಸಿ.ರೋಡ್ ಸೇರಿದಂತೆ ಅನೇಕ ಖ್ಯಾತ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು.

ಕ್ರಿಸ್ಟೋಫರ್ ನೀನಾಸಂ ಹಾಗೂ ವಿದ್ದು ಉಚ್ಚಿಲ್ ರಂಗಾಯಣ ಅವರಿಂದ ರಂಗಭೂಮಿ ತರಬೇತಿ ಪಡೆದಿರುವ ಅವರು, ತುಳು, ಕನ್ನಡ, ಕೊಂಕಣಿ ಹಾಗೂ ಅರೆಭಾಷೆ ಸೇರಿದಂತೆ 85ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ತಮ್ಮ ಕಲಾಸೇವೆಗೆ ಈಗಾಗಲೇ ಹಲವು ಪ್ರಶಸ್ತಿಗಳು ಲಭಿಸಿರುವುದಾಗಿ ತಿಳಿಸಿದ ಅವರು, 2017 ಹಾಗೂ 2025ರ ರೆಡ್ ಎಫ್.ಎಂ. ತುಳು ಫಿಲ್ಮ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ (CFA)ನಲ್ಲಿ ಸತತ ಮೂರು ಬಾರಿ ಅತ್ಯುತ್ತಮ ಪೋಷಕ ನಟಿ ಹಾಗೂ ವರ್ಸಟೈಲ್ ಆ್ಯಕ್ಟರ್ ಪ್ರಶಸ್ತಿಯನ್ನು ಪಡೆದಿರುವುದಾಗಿ ಹೇಳಿದರು. ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವುದರ ಜೊತೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿರುವುದಾಗಿ ತಿಳಿಸಿದರು.

ಇದಲ್ಲದೆ, ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕಾಸರಗೋಡು ಜಿಲ್ಲಾ ಉತ್ತಮ ನಟಿ ಸಮಮ್ ಅವಾರ್ಡ್–2024, ಮಂಜೇಶ್ವರ ಗಡಿನಾಡ ಪುರಸ್ಕಾರ, ತುಳುನಾಡ ಐಸಿರಿ, ಕಲಾ ಶಾರದೆ, ಕಲಾ ರತ್ನ, ಪಾಸ್ಕಲ್ ಮಾಸ್ಟರ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ದೆಹಲಿ, ತಮಿಳುನಾಡು ಸೇರಿದಂತೆ ಯುಎಇ, ಬಹರೇನ್, ಓಮನ್, ಕತಾರ್ ಹಾಗೂ ಕುವೈಟ್‌ನಲ್ಲಿ ಸಾವಿರಾರು ನಾಟಕ ಪ್ರದರ್ಶನಗಳನ್ನು ನೀಡಿರುವುದಾಗಿ ಅವರು ಹೇಳಿದರು.

ಪ್ರಸ್ತುತ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮ ತಂಡದೊಂದಿಗೆ ಕಲಾಸೇವೆಯನ್ನು ಮುಂದುವರಿಸಿರುವ ರೂಪಶ್ರೀ ವರ್ಕಾಡಿ, ರಾಷ್ಟ್ರ ಪ್ರಶಸ್ತಿ ಲಭಿಸಿರುವುದು ತಮ್ಮ ಜೀವನದ ಅತ್ಯಂತ ಮಹತ್ವದ ಕ್ಷಣವಾಗಿದೆ ಎಂದು ಹೇಳಿದರು. ತಮ್ಮ ಕಲಾ ಪಯಣದಲ್ಲಿ ಬೆಂಬಲ ಮತ್ತು ಪ್ರೋತ್ಸಾಹ ನೀಡಿದ ಮಾಧ್ಯಮ ಮಿತ್ರರು, ಕಲಾಭಿಮಾನಿಗಳು ಹಾಗೂ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, ಮುಂದಿನ ದಿನಗಳಲ್ಲಿಯೂ ಉತ್ತಮ ಕಲಾಸೇವೆ ಮೂಲಕ ಮತ್ತಷ್ಟು ಸಾಧನೆ ಮಾಡುವ ಸಂಕಲ್ಪ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ‘ಮಿಥ್ಯ’ ಚಿತ್ರದ ನಿರ್ದೇಶಕ ಸುಮಂತ್ ಭಟ್ ಹಾಗೂ ಬಾಲನಟ ಅತೀಶ್ ಶೆಟ್ಟಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!