ಕಾಸರಗೋಡು : ಬೇಡಗಂ ಪೊಲೀಸ್ ಠಾಣಾ ವ್ಯಾಪ್ತಿಯ ತೋರೋ ನಿವಾಸಿ ಟಿ. ಅನಶ್ವರ (19) ಹೊಟ್ಟೆಗೆ ವಿಷ ಸೇರಿ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಪ್ಲಸ್ಟು ಮುಗಿಸಿ ಉನ್ನತ ಶಿಕ್ಷಣಕ್ಕೆ ಸಿದ್ಧತೆ ನಡೆಸುತ್ತಿದ್ದ ಈಕೆಗೆ ಮಂಗಳವಾರ ಮುಂಜಾನೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣ ಕುಂಡಂಗುಳಿ ಕ್ಲಿನಿಕ್, ಬೇಡಗಂ ತಾಲೂಕು ಆಸ್ಪತ್ರೆ ಹಾಗೂ ಚೆಂಗಳದ ಸಹಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾಥರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪರೀಕ್ಷೆಯ ವೇಳೆ ಯುವತಿಯ ಹೊಟ್ಟೆಗೆ ವಿಷ ಸೇರಿರುವುದು ದೃಢಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಆಕೆ ಕೊನೆಯೆಳೆದಾಡಿದ್ದಾಳೆ. ತಂದೆ ನೀಡಿದ ದೂರಿನ ಮೇರೆಗೆ ಬೇಡಗಂ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.




