ಕಾಸರಗೋಡು : ರೇಷನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ಯುವಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿ, ಜಾತಿ ನಿಂದನೆ ಎಸಗಿದ ಗಂಭೀರ ಪ್ರಕರಣದಲ್ಲಿ ತಂದೆ ಹಾಗೂ ಮಗನಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಕುಂದ್ಲಾಜೆ ಗಾಡಿಗುಡ್ಡೆ ನಿವಾಸಿಗಳಾದ ಮ್ಯಾಥ್ಯು ತೆಂಜ್ನ್ ವಳಪ್ಪಿಲ್ ಎನ್ನುವ ವಾಕಚ್ಚನ್ (67) ಮತ್ತು ಅವರ ಪುತ್ರ ಅಖಿಲ್ ಮ್ಯಾಥ್ಯು ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ.
2021 ಮಾರ್ಚ್ 6ರಂದು ಸಂಜೆ 5:45ರ ಸುಮಾರಿಗೆ ಗಾಡಿಗುಡ್ಡೆಯ ರೇಷನ್ ಅಂಗಡಿಯಲ್ಲಿ ಈ ಅಮಾನವೀಯ ಕೃತ್ಯ ನಡೆದಿತ್ತು. ಅದೇ ಪ್ರದೇಶದ ಮೊಗೆರ ಸಮುದಾಯಕ್ಕೆ ಸೇರಿದ ಜಿ. ನಾರಾಯಣ್ ಎಂಬುವವರು ರೇಷನ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ, ಯಾವುದೇ ಸಮರ್ಥನೀಯ ಕಾರಣವಿಲ್ಲದೆ ಆರೋಪಿಗಳು ಅವರ ಮೇಲೆ ಮುಗಿಬೆದರಿದ್ದರು.

ಜಾತಿ ಹೆಸರಿಸಿ ತೀವ್ರವಾಗಿ ಅವಮಾನಿಸಿದ್ದಲ್ಲದೆ, ಕಬ್ಬಿಣದ ರಾಡ್ನಿಂದ ತಲೆಗೆ ಕ್ರೂರವಾಗಿ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ್ದರು.
ಈ ಕುರಿತು ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಎಸ್ಎಂಎಸ್ ಡಿವೈಎಸ್ಪಿ ಎಂ.ಡಿ. ಸುನಿಲ್ ಅವರು ಸಮಗ್ರ ತನಿಖೆ ನಡೆಸಿ ಕಾಸರಗೋಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಆರ್. ವಿನಾಯಕ ರಾವ್ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಆರೋಪಿಗಳಾದ ತಂದೆ-ಮಗುವಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.


