ಪುತ್ತೂರು: ಪುತ್ತೂರು ಗ್ರಾಮಾಂತರ ಠಾಣಾ ಸಿಬ್ಬಂದಿಗಳಾದ ಹೆಚ್‌ಸಿ ಮಧು ಹಾಗೂ ಸಿಪಿಸಿ ಭೀಮನ ಗೌಡ ಎಂ. ಬಿರಾದರ್ ಅವರು ಸೆ. 4ರಂದು ರಾತ್ರಿ ಹೊಯ್ಸಳ ವಾಹನದಲ್ಲಿ ಕರ್ತವ್ಯದಲ್ಲಿದ್ದ ವೇಳೆ, ಬಂದ ದೂರಿನ ಮೇರೆಗೆ ಪಡ್ನೂರು ಗ್ರಾಮದ ಮುಂಡಾಜೆಗೆ ತೆರಳಿದ್ದರು.

ಅಲ್ಲಿ ಮಹಿಳೆಯೊಬ್ಬರು ತನ್ನ ಪತಿ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದರು. ಈ ಕುರಿತು ನವೀನ್ ಎಂಬವರ ಬಳಿ ವಿಚಾರಿಸಿದಾಗ, ಅವರು ಕೋಪಗೊಂಡು ಪತ್ನಿಗೆ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ತಡೆಯಲು ಹೋದ ಪೊಲೀಸ್ ಸಿಬ್ಬಂದಿಗೆ ನವೀನ್, ಅವರ ತಾಯಿ ಹಾಗೂ ಸಹೋದರ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಲಾಗಿದೆ.

ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಆರೋಪಿತ ನವೀನ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಬಳಿಕ ಬಿಡುಗಡೆಗೊಂಡ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

