ಕಾಸರಗೋಡು: ಹಲವು ಪ್ರಕರಣಗಳ ತನಿಖೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ನಿವೃತ್ತ ಎಸ್ಐ ಧನ್ರಾಜ್ (65) ಅವರನ್ನು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಮಾಡಲಾಗಿದೆ.

ಕಣ್ಣೂರು ಮೂಲದ ಮುರಳೀಧರನ್ ಅವರ ಪುತ್ರರಾದ ಧನ್ರಾಜ್, ಕಾಸರಗೋಡಿನ ಪಾರಕ್ಕಟೆಯಲ್ಲಿ ಮನೆ ನಿರ್ಮಿಸಿ ವಾಸಿಸುತ್ತಿದ್ದರು.
ಇಂದು (ಸೋಮವಾರ) ಬೆಳಗ್ಗೆ ಧನ್ರಾಜ್ ಅವರನ್ನು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಮಾಡಲಾಗಿದೆ.

ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದ ಧನ್ರಾಜ್ ಉತ್ತಮ ತನಿಖಾಧಿಕಾರಿಯಾಗಿದ್ದರು.

ಕಾಸರಗೋಡು ಕ್ರೈಂ ಬ್ರಾಂಚ್ ಘಟಕದಿಂದ ನಿವೃತ್ತರಾದ ಬಳಿಕ ಚೆರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದರು.
ಆರೋಗ್ಯ ಸಮಸ್ಯೆಯ ಕಾರಣದಿಂದ ಎರಡು ತಿಂಗಳ ಹಿಂದೆ ಸದರಿ ಉದ್ಯೋಗದಿಂದ ಬಿಡುಡೆಗೊಂಡಿದ್ದರು.ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ಕಾಸರಗೋಡು ಟೌನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

