ನೇತ್ರಾವತಿ ಸಂರಕ್ಷಣೆಗೆ ಸಹಿ ಅಭಿಯಾನ: ಆ.15ರಂದು ಜನಪ್ರತಿನಿಧಿಗಳಿಗೆ ಬಹಿರಂಗ ಪತ್ರ

ಮಂಗಳೂರು: ನೇತ್ರಾವತಿ ನದಿ ಹಾಗೂ ಪಶ್ಚಿಮ ಘಟ್ಟದ ಜಲಾನಯನ ಪ್ರದೇಶಗಳ ಸಂರಕ್ಷಣೆಗೆ ಸಾರ್ವಜನಿಕರನ್ನು ಒಗ್ಗೂಡಿಸುವ ಉದ್ದೇಶದಿಂದ ವೆಸ್ಟರ್ನ್ ಘಾಟ್ಸ್ ನೇತ್ರಾವತಿ ಕನ್ಸರ್ವೇಶನ್ ಅಂಡ್ ರಿಲೀಫ್ ಫೋರಂ (WGNCF) ವತಿಯಿಂದ ರಾಜ್ಯವ್ಯಾಪಿ ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗುತ್ತಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸಂಚಾಲಕ ಆದಿತ್ಯ, ನೇತ್ರಾವತಿ ನದಿ ಮತ್ತು ಪಶ್ಚಿಮ ಘಟ್ಟದ ಪರಿಸರ ವ್ಯವಸ್ಥೆಯನ್ನು ರಕ್ಷಿಸುವುದು, ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುವುದು ಹಾಗೂ ಪರಿಸರ ನಾಶದ ವಿರುದ್ಧ ಹೋರಾಡುವುದು ಸಂಘಟನೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ನೇತ್ರಾವತಿ ನದಿ ತುಳುನಾಡಿನ ಸುಮಾರು 3,000 ವರ್ಷಗಳ ನಾಗರಿಕತೆಯ ಜೀವನಾಡಿಯಾಗಿದ್ದು, ಯೆಟ್ಟಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹೆಸರಿನಲ್ಲಿ ನಡೆಯುತ್ತಿರುವ ನದಿ ತಿರುವು ಯೋಜನೆಯಿಂದ ನದಿ ಹಾಗೂ ಪಶ್ಚಿಮ ಘಟ್ಟದ ಪರಿಸರ ವ್ಯವಸ್ಥೆಗೆ ಗಂಭೀರ ಹಾನಿಯಾಗುತ್ತಿದೆ ಎಂದು ಆರೋಪಿಸಿದರು. ಯೋಜನೆಗೆ ವಿರುದ್ಧವಾಗಿ ವೈಜ್ಞಾನಿಕ ವರದಿಗಳಿದ್ದರೂ ಕಳೆದ 14 ವರ್ಷಗಳಿಂದ ಕಾಮಗಾರಿ ಮುಂದುವರಿದಿದ್ದು, ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುವುದರ ಜೊತೆಗೆ ಪರಿಸರಕ್ಕೂ ಅಪಾರ ಹಾನಿಯಾಗಿದೆ ಎಂದು ದೂರಿದರು.

ಪಶ್ಚಿಮ ಘಟ್ಟ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ ಜನಪ್ರತಿನಿಧಿಗಳಿಗೆ ಉದ್ದೇಶಿಸಿ ಸಿದ್ಧಪಡಿಸಿರುವ ಬಹಿರಂಗ ಪತ್ರಕ್ಕೆ ಸಾರ್ವಜನಿಕರಿಂದ ಸಹಿ ಸಂಗ್ರಹಿಸಲಾಗುವುದು. ಸಂಗ್ರಹಿಸಲಾದ ಸಹಿಗಳೊಂದಿಗೆ ಆಗಸ್ಟ್‌ 15ರಂದು ಎಲ್ಲಾ ಜನಪ್ರತಿನಿಧಿಗಳಿಗೆ ಅಂಚೆ ಮೂಲಕ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.

ನೇತ್ರಾವತಿ ನದಿ ಹಾಗೂ ಪಶ್ಚಿಮ ಘಟ್ಟದ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸಿ ಪರಿಸರ ಹೋರಾಟವನ್ನು ಬಲಪಡಿಸುವುದು ಅಭಿಯಾನದ ಉದ್ದೇಶವಾಗಿದೆ. ಸುದ್ದಿಗೋಷ್ಠಿಯ ಬಳಿಕ ಬಹಿರಂಗ ಪತ್ರದ ಲಿಂಕ್ ಬಿಡುಗಡೆ ಮಾಡಿ ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸದಸ್ಯರಾದ ರಸೆಲ್, ಮುಜಮ್ಮಿಲ್, ಗೌತಮ್ ಹಾಗೂ ಆರ್ಯನ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!