ವಂದೇ ಭಾರತ್‌ ರೈಲಿನಲ್ಲಿ ಮೊದಲ ಬಾರಿಗೆ ಜೀವಂತ ಹೃದಯ ಸಾಗಣೆ; ಅಂಗಾಂಗ ಕಸಿಗೆ ಹೊಸ ಮೈಲಿಗಲ್ಲು

ಅಹಮದಾಬಾದ್: ಭಾರತೀಯ ರೈಲ್ವೆ ದೇಶದಲ್ಲೇ ಮೊದಲ ಬಾರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಜೀವಂತ ಹೃದಯವನ್ನು ಯಶಸ್ವಿಯಾಗಿ ಸಾಗಿಸುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಸೂರತ್‌ನಿಂದ ಅಹಮದಾಬಾದ್‌ನ ಯು.ಎನ್. ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್‌ಗೆ ಹೃದಯವನ್ನು ಕಸಿ ಉದ್ದೇಶಕ್ಕಾಗಿ ಮುಂಬೈ ಸೆಂಟ್ರಲ್–ಗಾಂಧಿನಗರ ಕ್ಯಾಪಿಟಲ್ ವಂದೇ ಭಾರತ್ ಎಕ್ಸ್‌ಪ್ರೆಸ್ (20901) ಮೂಲಕ ಕಳುಹಿಸಲಾಯಿತು.

ಸುಮಾರು 3 ಗಂಟೆ 45 ನಿಮಿಷಗಳಲ್ಲಿ (217 ನಿಮಿಷ) ಹೃದಯವನ್ನು ಅಹಮದಾಬಾದ್‌ಗೆ ತಲುಪಿಸಲಾಯಿತು. ರೈಲು ನಿಲ್ದಾಣದಿಂದ ಆಸ್ಪತ್ರೆಗೆ ಗುಜರಾತ್ ಪೊಲೀಸ್ ಹಾಗೂ ರೈಲ್ವೆ ಭದ್ರತಾ ಪಡೆ (RPF) ಸಹಯೋಗದಲ್ಲಿ ಗ್ರೀನ್ ಕಾರಿಡಾರ್ ನಿರ್ಮಿಸಿ, ಯಾವುದೇ ವಿಳಂಬವಾಗದಂತೆ ಹೃದಯವನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಹೃದಯ ಸೇರಿದಂತೆ ಎರಡು ಮೂತ್ರಪಿಂಡಗಳು ಮತ್ತು ಒಂದು ಯಕೃತ್ತು ಸೂರತ್‌ನಲ್ಲಿ ವಾಸಿಸುತ್ತಿದ್ದ ಒಡಿಶಾ ಮೂಲದ 36 ವರ್ಷದ ಜವಳಿ ಕಾರ್ಮಿಕನಿಂದ ಅಂಗದಾನದ ಮೂಲಕ ಪಡೆಯಲಾಗಿತ್ತು. ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಂಗದಾನಕ್ಕೆ ಸಮ್ಮತಿಸಿದ್ದು, ನಾಲ್ವರು ರೋಗಿಗಳಿಗೆ ಹೊಸ ಜೀವನ ದೊರೆಯುವ ನಿರೀಕ್ಷೆಯಿದೆ.

ಭಾರತೀಯ ರೈಲ್ವೆ, ಗುಜರಾತ್ ಪೊಲೀಸ್, ಆರ್‌ಪಿಎಫ್ ಹಾಗೂ ವೈದ್ಯಕೀಯ ತಂಡಗಳ ಸಮನ್ವಯದಿಂದ ಈ ಕಾರ್ಯಾಚರಣೆ ಯಶಸ್ವಿಯಾಗಿ ನೆರವೇರಿದ್ದು, ದೇಶದಲ್ಲಿ ರೈಲಿನ ಮೂಲಕ ಜೀವಂತ ಅಂಗಾಂಗ ಸಾಗಣೆಗೆ ಇದು ಮೊದಲ ಯಶಸ್ವಿ ಉದಾಹರಣೆಯಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!