ಮಂಗಳೂರು:ತೊಕ್ಕೊಟ್ಟು ವಿನಮ್ರ ಬಾರ್ ಬಳಿ ತಲವಾರು ಬೀಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಆರೋಪದ ಮೇಲೆ ರೌಡಿಶೀಟರ್ವೊಬ್ಬನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಉಳ್ಳಾಲದ ಮರ್ಗತಲೆ ನಿವಾಸಿ ಮೊಹಮ್ಮದ್ ಶಾಕಿರ್ (31) ಎಂದು ಗುರುತಿಸಲಾಗಿದೆ. ಈತ ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ರೌಡಿಶೀಟರ್ ಆಗಿದ್ದಾನೆ ಎನ್ನಲಾಗಿದೆ.
ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸುಮಾರು 12ರಿಂದ 12.20ರ ನಡುವೆ ಘಟನೆ ನಡೆದಿದೆ. ಮದ್ಯಪಾನ ಮಾಡಿದ್ದ ಶಾಕಿರ್ ತಲವಾರು ಹಿಡಿದು ಬಾರ್ ಬಳಿ ಬಂದು ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾರ್ ಬಳಿ ತಲವಾರು ಬೀಸುತ್ತಾ, “ನಿನಗೆ ಇಷ್ಟು ಹೊತ್ತು ಓಪನ್ ಇಡಲು ಪರ್ಮಿಷನ್ ಕೊಟ್ಟದ್ದು ಯಾರು? ಬಂದ್ ಮಾಡು” ಎಂದು ತುಳು ಭಾಷೆಯಲ್ಲಿ ಹೇಳಿರುವ ದೃಶ್ಯ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತಲವಾರು ಬೀಸಿದ ಪರಿಣಾಮ ಬಾರ್ನಲ್ಲಿದ್ದವರು ಭಯಭೀತರಾಗಿ ಆಚೀಚೆ ಓಡಿದ್ದು, ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶಾಕಿರ್ನನ್ನು ಬಂಧಿಸಿದ್ದು, ಆತನಿಂದ ಕೃತ್ಯಕ್ಕೆ ಬಳಸಿದ್ದ ತಲವಾರನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಮತ್ತೋರ್ವನಾದ ಮಂಚಿಲ ನಿವಾಸಿ ಅಶ್ಪಾಕ್ (28) ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ವಿವಿಧ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.


