ಮಂಜೇಶ್ವರ: ಪೀಸ್ ಕ್ರಿಯೇಟಿವ್ ಸೆಂಟ್ರಲ್ ಶಾಲೆಗಳಲ್ಲಿ ವಿಜೃಂಭಣೆಯ ಸ್ವಾತಂತ್ರ್ಯೋತ್ಸವ : ಗಮನ ಸೆಳೆದ ವಿದ್ಯಾರ್ಥಿಗಳ ಭಾರತ ಭೂಪಟದ ಮಾನವ ಸರಪಳಿ

ಮಂಜೇಶ್ವರ: 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಮಂಜೇಶ್ವರದ ಪ್ರತಿಷ್ಠಿತ ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಗಳಾದ ಕುಂಜತ್ತೂರು ಹಾಗೂ ಹೊಸಂಗಡಿ ಶಾಲೆಗಳಲ್ಲಿ ಅತ್ಯಂತ ಸಡಗರ ಮತ್ತು ದೇಶಭಕ್ತಿಯಿಂದ ಆಚರಿಸಲಾಯಿತು.

​ಕಾರ್ಯಕ್ರಮದ ವಿಶೇಷಾಕರ್ಷಣೆಯಾಗಿ ವಿದ್ಯಾರ್ಥಿಗಳು ಭಾರತ ಭೂಪಟದ ನಕ್ಷೆಯಂತೆ ನಿಂತು, ಮಧ್ಯದಲ್ಲಿ ಅಶೋಕ ಚಕ್ರವನ್ನು ಅಳವಡಿಸಿ ನಿರ್ಮಿಸಿದ ಬೃಹತ್ ಮಾನವ ಸರಪಳಿ ನೆರೆದಿದ್ದವರಲ್ಲಿ ಭಾರೀ ದೇಶಪ್ರೇಮವನ್ನು ಮೂಡಿಸಿತು ಮತ್ತು ಎಲ್ಲರ ಗಮನ ಸೆಳೆಯಿತು.



​ಕುಂಜತ್ತೂರು ಶಾಲೆಯಲ್ಲಿ ಶಾಲಾ ಪ್ರಾಂಶುಪಾಲರಾದ ಅಬ್ದುಲ್ ಖಾದರ್ ಹಾಗೂ ಹೊಸಂಗಡಿ ಶಾಲೆಯಲ್ಲಿ ಶಾಲಾ ಚೇರ್ಮನ್ ಹಾಜಿ ಅಬ್ದುಲ್ ರಹ್ಮಾನ್ ಅರಿಮಲ ಧ್ವಜಾರೋಹಣಗೈದು ವಿದ್ಯಾರ್ಥಿಗಳಿಂದ ಧ್ವಜ ವಂದನೆ ಸ್ವೀಕರಿಸಿದರು. ಇದರ ಬಳಿಕ ವಿದ್ಯಾರ್ಥಿಗಳ ಶಿಸ್ತಿನ ಪಥಸಂಚಲನ, ರಾಷ್ಟ್ರಗೀತೆ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ವಿಶೇಷ ಭಾಷಣಗಳು ಹಾಗೂ ದೇಶಭಕ್ತಿ ಗೀತೆಗಳು ಕಾರ್ಯಕ್ರಮಕ್ಕೆ ಮೆರುಗು ತಂದವು.

​ಈ ಸಂದರ್ಭದಲ್ಲಿ ಮಾತನಾಡಿದ ಕುಂಜತ್ತೂರು ಶಾಲೆಯ ಪ್ರಾಂಶುಪಾಲರಾದ ಅಬ್ದುಲ್ ಖಾದರ್,
​ಸ್ವಾತಂತ್ರ್ಯ ಎಂಬುದು ನಮಗೆ ಸುಲಭವಾಗಿ ಸಿಕ್ಕಿದ್ದಲ್ಲ ತ್ಯಾಗ, ಬಲಿದಾನ ಮತ್ತು ಅಹಿಂಸಾತ್ಮಕ ಹೋರಾಟಗಳ ಫಲವಾಗಿ ನಮ್ಮ ಹೆಮ್ಮೆಯ ರಾಷ್ಟ್ರಕ್ಕೆ ಸ್ವಾತಂತ್ರ್ಯ ಲಭಿಸಿದೆ. ಇಂದಿನ ವಿದ್ಯಾರ್ಥಿಗಳು ನಾಳಿನ ಭಾರತದ ಭವಿಷ್ಯವಾಗಿದ್ದು, ಸಂವಿಧಾನದ ಮೌಲ್ಯಗಳನ್ನು ಅರಿತು, ದೇಶದ ಅಖಂಡತೆ ಮತ್ತು ಸೌಹಾರ್ದತೆಯನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೇಶದ ಅಭಿವೃದ್ಧಿಗಾಗಿ ಯುವಜನತೆ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕು,”
​ಎಂದು ಕರೆ ನೀಡಿದರು.

​ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್ ಪ್ರಾಂಶುಪಾಲ ಇಜಾಝ್, ವಿವಿಧ ವಿಭಾಗಗಳ ಕೋರ್ಡಿನೇಟರ್‌ಗಳು, ಅಧ್ಯಾಪಕ ವೃಂದ, ಶಾಲಾ ಸಿಬ್ಬಂದಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಉತ್ಸಾಹದಿಂದ ಪಾಲ್ಗೊಂಡು ರಾಷ್ಟ್ರೀಯೋತ್ಸವವನ್ನು ಯಶಸ್ವಿಗೊಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!