ಕಾಸರಗೋಡು: ತುಳುನಾಡಿನ ಹಿಂದೂ ಸಮಾಜದ ಎಲ್ಲಾ ಜಾತಿ-ವರ್ಗದವರು ಭಕ್ತಿ ಮತ್ತು ಸಡಗರದಿಂದ ಆಚರಿಸುವ ಪ್ರಮುಖ ಹಬ್ಬವಾದ ನಾಗರ ಪಂಚಮಿಗೆ ಕಾಸರಗೋಡು ಜಿಲ್ಲೆಯಲ್ಲಿ ಪ್ರಾದೇಶಿಕ ರಜೆ ನೀಡುವಂತೆ ಬಾಕುಡ ಸಮಾಜ ಆಗ್ರಹಿಸಿದೆ.

ನಾಗರ ಪಂಚಮಿ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯ ವಿವಿಧ ದೇವಸ್ಥಾನಗಳು ಹಾಗೂ ತರವಾಡುಗಳಲ್ಲಿ ಭಕ್ತರು ಒಗ್ಗೂಡಿ ನಾಗದೇವರಿಗೆ ಹಾಲು ಮತ್ತು ಸೀಯಾಳದ ಅಭಿಷೇಕ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ. ಈ ಪುಣ್ಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸುವ ಹಿನ್ನೆಲೆಯಲ್ಲಿ, ನಾಗರ ಪಂಚಮಿ ದಿನದಂದು ಕಾಸರಗೋಡು ಜಿಲ್ಲೆಗೆ ಪ್ರಾದೇಶಿಕ ರಜೆ ಘೋಷಿಸುವಂತೆ ಸಮಾಜ ಒತ್ತಾಯಿಸಿದೆ.


ಈ ಕುರಿತು ಕಾಸರಗೋಡು ಜಿಲ್ಲಾಧಿಕಾರಿ ಹಾಗೂ ಮಂಜೇಶ್ವರ ಶಾಸಕರಿಗೆ ಮನವಿ ಸಲ್ಲಿಸಲಾಗುವುದು ಎಂದು ಬಾಕುಡ ಸಮಾಜದ ಅಧ್ಯಕ್ಷರಾದ ಶ್ರೀ ತುಳಸಿದಾಸ್ ಮಂಜೇಶ್ವರ ಹಾಗೂ ಸಮಾಜದ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

