ಕಾಸರಗೋಡು: ಸ್ವಾತಂತ್ರ್ಯ ದಿನದ ಸಂಭ್ರಮದ ನಡುವೆಯೇ ಆಸ್ಪತ್ರೆಯೊಂದರ ಬೇಜವಾಬ್ದಾರಿಯಿಂದ ಕಣ್ಣೂರಿನಲ್ಲಿ ವೃದ್ಧರೊಬ್ಬರ ಶವ ಶರೀರ ಅದಲು ಬದಲಾಗಿದೆ.

ಹೊಸದುರ್ಗ ತಾಲೂಕಿನ ಚಿತ್ತಾರಿಕ್ಕಲ್ ನಿವಾಸಿ ಪಿ.ಸಿ. ಥೋಮಸ್ (86) ಅವರ ಮೃತದೇಹ ಕರುವಂಜಾಲ್ ಸೇಂಟ್ ಜೋಸೆಫ್ ಆಸ್ಪತ್ರೆಯಲ್ಲಿ ಬೇರೆಯವರ ಶವದೊಂದಿಗೆ ಅದಲಾಬದಲಿಯಾಗಿದೆ.
ವಯೋಸಹಜ ಅಸೌಖ್ಯದಿಂದ ಶುಕ್ರವಾರ ಸಂಜೆ ಸಾವನ್ನಪ್ಪಿದ್ದ ಥೋಮಸ್ ಅವರ ಮೃತದೇಹವನ್ನು ಶನಿವಾರ ಬೆಳಿಗ್ಗೆ ಮನೆಗೆ ತರಲಾಗಿತ್ತು. ಅಂತಿಮ ದರ್ಶನದ ವೇಳೆ ಶವ ಅವರದ್ದಲ್ಲ ಎಂಬುದು ಕುಟುಂಬದವರ ಗಮನಕ್ಕೆ ಬಂತು. ಕೂಡಲೇ ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಸಿಬ್ಬಂದಿಯ ನಿರ್ಲಕ್ಷ್ಯ ಬಯಲಾಯಿತು.

ಆಸ್ಪತ್ರೆಯವರು ಕೂಡಲೇ ಥೋಮಸ್ ಅವರ ನಿಜವಾದ ಮೃತದೇಹವನ್ನು ತಲುಪಿಸಿ, ಬೇರೆಡೆಗೆ ಹೋಗಿದ್ದ ಶವವನ್ನು ಪಡೆದುಕೊಂಡರು. ಮೋರ್ಚರಿ ಸಿಬ್ಬಂದಿಯ ಈ ಪ್ರಮಾದದಿಂದ ಮಧ್ಯಾಹ್ನ ನಿಗದಿಯಾಗಿದ್ದ ಅಂತ್ಯಕ್ರಿಯೆ ವಿಳಂಬವಾಗಿ ನೆರವೇರಿತು.

