ಕಾಸರಗೋಡು ನಗರದಲ್ಲಿ ರಾಮಾಯಣ ಮಾಸಾಚರಣೆಯ ಅಂಗವಾಗಿ ಒಂದು ತಿಂಗಳ ಕಾಲ ನಡೆದ ಧರ್ಮ ಜಾಗೃತಿ ಭಜನಾ ಯಾತ್ರೆಗೆ ಇಂದು ಸಮಾರೋಪ ನಡೆಯಲಿದೆ.

ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡದ ವತಿಯಿಂದ ಜುಲೈ 17ರಿಂದ ಆರಂಭಗೊಂಡಿದ್ದ ಈ ಭಜನಾ ಯಾತ್ರೆಯಲ್ಲಿ ನಗರದ ವಿವಿಧ ಮನೆಗಳಿಗೆ ತೆರಳಿ ಶ್ರೀರಾಮನ ಸ್ಮರಣೆಯೊಂದಿಗೆ ಭಜನೆ ಹಾಗೂ ಸಂಕೀರ್ತನೆ ನಡೆಸಲಾಗಿದೆ.

ಮನೆ ಮನೆಗೆ ಭಜನೆಯ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುವುದು ಮತ್ತು ಪ್ರತಿಯೊಂದು ಮನೆಯಲ್ಲೂ ಪ್ರತಿದಿನ ಭಜನೆ ನಡೆಯುವಂತಾಗಬೇಕು ಎಂಬ ಸಂದೇಶವನ್ನು ಯಾತ್ರೆಯ ಮೂಲಕ ನೀಡಲಾಗಿದೆ.

ಈ ಸಂಕೀರ್ತನಾ ಸೇವೆಯಲ್ಲಿ ಸ್ಥಳೀಯ ಭಜನಾಸಕ್ತರು, ಮಹನೀಯರು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದ್ದರು. ಭಜನೆಗೆ ತಮ್ಮ ಮನೆಗಳಲ್ಲಿ ಅವಕಾಶ ಕಲ್ಪಿಸಿದ ಕುಟುಂಬಗಳಿಗೆ ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಸಂಘಟಕರು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ವರ್ಷದ ರಾಮಾಯಣ ಮಾಸಾಚರಣೆಯ ಕೊನೆಯ ಭಜನೆ ಸಂಕೀರ್ತನೆ ಇಂದು ಸಂಜೆ 7ರಿಂದ 8 ಗಂಟೆಯವರೆಗೆ ಕಾಸರಗೋಡು ಪೇಟೆಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ.
ಶ್ರೀರಾಮನ ನಾಮಸ್ಮರಣೆಯೊಂದಿಗೆ ನಡೆಯುವ ಈ ಸಮಾರೋಪ ಭಜನಾ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

