ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ 16ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ-2026’ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಎರಡು ದಿನಗಳ ಮೇಳದಲ್ಲಿ 332 ಕಂಪನಿಗಳು ಭಾಗವಹಿಸಿದ್ದು, 15,539 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು ಎಂದು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳದಲ್ಲಿ 2,416 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗದ ಆಫರ್ ದೊರೆತಿದ್ದು, 6,183 ಅಭ್ಯರ್ಥಿಗಳು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಶಾರ್ಟ್‌ಲಿಸ್ಟ್ ಆಗಿದ್ದಾರೆ ಎಂದರು.

ಈಗಾಗಲೇ 301 ಕಂಪನಿಗಳ ಫಲಿತಾಂಶಗಳನ್ನು www.alvaspragati.com ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಆಯ್ಕೆ ಅಥವಾ ಶಾರ್ಟ್‌ಲಿಸ್ಟ್ ವಿವರಗಳನ್ನು ವೆಬ್‌ಸೈಟ್ ಮೂಲಕ ಪರಿಶೀಲಿಸಬಹುದು. ಉಳಿದ ಕಂಪನಿಗಳ ಫಲಿತಾಂಶಗಳನ್ನು ಮಾಹಿತಿ ಲಭ್ಯವಾದಂತೆ ಪ್ರಕಟಿಸಲಾಗುವುದು. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಐಟಿಐ ಅಭ್ಯರ್ಥಿಗಳ ನೇಮಕಾತಿ ವಿವರಗಳನ್ನು ದೂರವಾಣಿ ಕರೆ ಮತ್ತು ಎಸ್‌ಎಂಎಸ್ ಮೂಲಕ ತಿಳಿಸಲಾಗುತ್ತಿದೆ ಎಂದು ಹೇಳಿದರು.

ಉತ್ಪಾದನಾ ಕ್ಷೇತ್ರದಲ್ಲಿ ಉತ್ತಮ ನೇಮಕಾತಿ
ಉತ್ಪಾದನಾ ವಲಯದ 75 ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದು, 924 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿ, 523 ಮಂದಿ ಆಯ್ಕೆಯಾಗಿದ್ದಾರೆ. ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ 216 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದೆ. ಎಚ್‌ಎಲ್ ಮಾಂಡೊ ಸಂಸ್ಥೆ 99 ಎಂಜಿನಿಯರಿಂಗ್ ಪದವೀಧರರನ್ನು ಚೆನ್ನೈ ಉದ್ಯೋಗಕ್ಕೆ ಆಯ್ಕೆ ಮಾಡಿಕೊಂಡಿದ್ದು, ವಾರ್ಷಿಕ ₹3.4 ಲಕ್ಷ ವೇತನ ಪ್ಯಾಕೇಜ್ ನೀಡಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟರ್ ಸಂಸ್ಥೆ ಓರ್ವ ಚಾರ್ಟರ್ಡ್ ಅಕೌಂಟೆಂಟ್ ಅಭ್ಯರ್ಥಿಯನ್ನು ₹11 ಲಕ್ಷ ವಾರ್ಷಿಕ ಪ್ಯಾಕೇಜ್‌ಗೆ ಶಾರ್ಟ್‌ಲಿಸ್ಟ್ ಮಾಡಿದೆ.

ಐಟಿ, ಬ್ಯಾಂಕಿಂಗ್ ಕ್ಷೇತ್ರದಲ್ಲೂ ಅವಕಾಶ
ಐಟಿ ಮತ್ತು ಐಟಿಇಎಸ್ ಕ್ಷೇತ್ರದ 34 ಕಂಪನಿಗಳು ಭಾಗವಹಿಸಿದ್ದು, 1,301 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿದ್ದಾರೆ. 96 ಮಂದಿಗೆ ಸ್ಥಳದಲ್ಲೇ ಉದ್ಯೋಗದ ಆಫರ್ ದೊರೆತಿದೆ.
ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ಕ್ಷೇತ್ರದಲ್ಲಿ 913 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿದ್ದು, 211 ಮಂದಿಗೆ ಸ್ಥಳದಲ್ಲೇ ಉದ್ಯೋಗ ದೊರೆತಿದೆ. EXL Services ಸಂಸ್ಥೆ 38 ಅಭ್ಯರ್ಥಿಗಳನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಂಡಿದೆ.
ಔಷಧೀಯ ಹಾಗೂ ಆರೋಗ್ಯ ಕ್ಷೇತ್ರದಲ್ಲೂ ಉತ್ತಮ ನೇಮಕಾತಿ ನಡೆದಿದ್ದು, ವಿವಿಧ ಔಷಧ ಕಂಪನಿಗಳು 159 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ 40 ಮಂದಿಯನ್ನು ಆಯ್ಕೆ ಮಾಡಿಕೊಂಡಿವೆ. ಮುಂಬೈನ ಬೆಥನಿ ಆಸ್ಪತ್ರೆ 103 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದೆ.

ವಿದೇಶದಲ್ಲೂ ಉದ್ಯೋಗಾವಕಾಶ
‘ಆಳ್ವಾಸ್ ಪ್ರಗತಿ-2026’ ಮೂಲಕ ಯುಎಇ ಹಾಗೂ ಸೌದಿ ಅರೇಬಿಯಾದಲ್ಲೂ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಜಿಬಿಎಂಟಿ ಸ್ಪೆಕ್ಟ್ರಲ್ ಸ್ಟೀಲ್ ಮ್ಯಾನುಫ್ಯಾಕ್ಟರಿಂಗ್ ಇಂಡಸ್ಟ್ರೀಸ್ ಸಂಸ್ಥೆ 9 ಅಭ್ಯರ್ಥಿಗಳನ್ನು ಯುಎಇ ಉದ್ಯೋಗಕ್ಕೆ ಆಯ್ಕೆ ಮಾಡಿಕೊಂಡಿದೆ. ಎಕ್ಸ್‌ಪರ್ಟ್ನಸ್ ಕಾಂಟ್ರಾಸ್ಟಿಂಗ್ ಸಂಸ್ಥೆ 117 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, 13 ಮಂದಿಯನ್ನು ಸೌದಿ ಅರೇಬಿಯಾ ಹಾಗೂ ಗುಜರಾತ್‌ನ ಅದಾನಿ ಮುಂದ್ರಾ ಯೋಜನೆಗಳಿಗೆ ಆಯ್ಕೆ ಮಾಡಿದೆ.
ವಿಶೇಷಚೇತನ ಅಭ್ಯರ್ಥಿಗಳಿಗೂ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ವಿವಿಧ ಕಂಪನಿಗಳು ಅವರನ್ನು ನೇಮಕ ಮಾಡಿಕೊಂಡಿವೆ. ಉತ್ಪಾದನೆ, ಐಟಿ, ಬ್ಯಾಂಕಿಂಗ್, ಔಷಧ, ಆರೋಗ್ಯ, ಆತಿಥ್ಯ ಹಾಗೂ ಚಿಲ್ಲರೆ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳ ಕಂಪನಿಗಳ ಭಾಗವಹಿಸುವಿಕೆ ಮೇಳದ ವಿಶೇಷತೆಯಾಗಿತ್ತು.

ಉದ್ಯೋಗಾಕಾಂಕ್ಷಿಗಳಿಗೆ ನಿರಂತರವಾಗಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಅಭ್ಯರ್ಥಿಗಳ ಸಮಗ್ರ ದತ್ತಾಂಶವನ್ನು ವರ್ಷಪೂರ್ತಿ ಬಳಸಿಕೊಳ್ಳಲಾಗುವುದು. ವಿವಿಧ ಕಂಪನಿಗಳಿಂದ ಲಭ್ಯವಾಗುವ ಉದ್ಯೋಗಾವಕಾಶಗಳಿಗೆ ಅರ್ಹ ಅಭ್ಯರ್ಥಿಗಳನ್ನು ಸಂಪರ್ಕಿಸುವ ಕಾರ್ಯ ಮುಂದುವರಿಯಲಿದೆ. ತಾಲೂಕು ಮಟ್ಟದಲ್ಲೂ ಘಟಕಗಳನ್ನು ಸ್ಥಾಪಿಸಿ ಅಭ್ಯರ್ಥಿಗಳಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವೇಕ್ ಆಳ್ವ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಪ್ರಗತಿ ಉತ್ಪಾದನಾ ವಲಯದ ಮುಖ್ಯಸ್ಥರಾದ ಡಾ. ಕುಮಾರಸ್ವಾಮಿ, ಉದ್ಯೋಗ ನಿಯೋಜನಾ ವಿಭಾಗದ ಮುಖ್ಯಸ್ಥೆ ಕುಮಾರಿ ರಂಜಿತಾ ಆಚಾರ್ಯ, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಪಿ.ಆರ್ ಒ. ದಿಶಾ ಶೆಟ್ಟಿ ಉಪಸ್ಥಿತರಿದ್ದರು.

