EV ಆಟೋ ಪರ್ಮಿಟ್ ಗೊಂದಲ: ನಿಯಮ ಸಡಿಲಿಕೆಗೆ ಆಟೋ ಚಾಲಕರ ಆಗ್ರಹ

ಮಂಗಳೂರು: EV ಆಟೋಗಳ ಪರ್ಮಿಟ್ ಹಾಗೂ ವಿಂಗಡಣೆ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಟೀಮ್ ಗ್ರೀನ್ ಸಿಟಿ ದಕ್ಷಿಣ ಕನ್ನಡ ಜಿಲ್ಲಾ ಆಟೋ ಚಾಲಕ-ಮಾಲಕರ ಸಂಘದ ವತಿಯಿಂದ ಮಂಗಳೂರಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಮಾತನಾಡಿದ ಟೀಮ್ ಗ್ರೀನ್ ಸಿಟಿಯ ಮಾಜಿ ಅಧ್ಯಕ್ಷ ಪ್ರಜೇಶ್, ಅಕ್ಟೋಬರ್ 30ರೊಳಗೆ ಬಂದಿರುವ ಎಲ್ಲಾ EV ಆಟೋಗಳಿಗೆ ಮಂಗಳೂರು ನಗರದಲ್ಲಿ ಸಂಚರಿಸಲು ಪರ್ಮಿಟ್ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಗ್ರಾಮಾಂತರ ವಿಳಾಸ ಹೊಂದಿರುವ ಹಾಗೂ ಮಹಿಳೆಯರ ಹೆಸರಿನಲ್ಲಿರುವ ಹಲವು ವಾಹನಗಳ ಪರ್ಮಿಟ್‌ಗಳನ್ನು ಬಾಕಿ ಇರಿಸಿ, ಇದೀಗ ಗ್ರಾಮಾಂತರ ಪರ್ಮಿಟ್ ನೀಡಿ ‘ಕೋರ್ಟ್ ಆದೇಶ ಬರುವವರೆಗೆ ಮಂಗಳೂರು ನಗರದಲ್ಲಿ ಸಂಚರಿಸಬಹುದು’ ಎಂಬ ಮುದ್ರೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಸಾಲ ಮಾಡಿ, ಚಿನ್ನಾಭರಣ ಅಡಮಾನವಿಟ್ಟು ಹಲವರು EV ಆಟೋ ಖರೀದಿಸಿದ್ದು, ಮಂಗಳೂರಿನಲ್ಲಿ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪದೇಪದೇ ನಿಯಮ ಬದಲಿಸುವ ಮೂಲಕ ಚಾಲಕರ ಬದುಕಿನೊಂದಿಗೆ ಅಧಿಕಾರಿಗಳು ಆಟವಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದಿನ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರ ಅವಧಿಯಲ್ಲಿ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಬಳಿಕ ಪರ್ಮಿಟ್ ಕಡ್ಡಾಯ, ವಾಹನಗಳ ಸಂಖ್ಯೆಗೆ ಮಿತಿ ಸೇರಿದಂತೆ ಹಲವು ನಿಯಮಗಳನ್ನು ವಿಧಿಸಲಾಯಿತು. ಅಕ್ಟೋಬರ್ 30ರೊಳಗೆ ಬಂದ ವಾಹನಗಳಿಗೆ ಪರ್ಮಿಟ್ ನೀಡುವುದಾಗಿ ಹೇಳಿದ್ದರೂ ಇದೀಗ ಮತ್ತೆ ಗೊಂದಲ ಸೃಷ್ಟಿಸಲಾಗಿದೆ ಎಂದರು.

ನಗರದಲ್ಲಿ ಸಂಚರಿಸಲು ತಾತ್ಕಾಲಿಕ ಪರ್ಮಿಟ್ ನೀಡಿರುವುದು ಇದೇ ಮೊದಲ ಬಾರಿ ಕಂಡುಬರುತ್ತಿದೆ. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ‘ಪರ್ಮಿಟ್ ನೀಡಲಾಗಿದೆ’ ಎಂಬ ದಾಖಲೆ ಸೃಷ್ಟಿಸುವ ಉದ್ದೇಶದಿಂದ ತಾತ್ಕಾಲಿಕ ಪರ್ಮಿಟ್ ನೀಡಲಾಗುತ್ತಿದೆಯೇ ಎಂಬ ಅನುಮಾನವಿದೆ ಎಂದು ಪ್ರಜೇಶ್ ಪ್ರಶ್ನಿಸಿದರು.

EV ಆಟೋಗಳಿಗೆ ಮಾತ್ರ ‘RC ಮಾಲೀಕರೇ ವಾಹನ ಚಲಾಯಿಸಬೇಕು’ ಎಂಬ ನಿಯಮ ವಿಧಿಸಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಇದೇ ನಿಯಮವನ್ನು CNG ಹಾಗೂ LPG ಆಟೋಗಳಿಗೂ ಅನ್ವಯಿಸಬೇಕು ಎಂದು ಆಗ್ರಹಿಸಿದರು. ಒಂದು ವರ್ಗಕ್ಕೆ ಮಾತ್ರ ನಿಯಮ ವಿಧಿಸುವುದು ತಾರತಮ್ಯವಾಗಿದೆ ಎಂದು ಆರೋಪಿಸಿದರು.

ಇನ್ನು ಆಟೋಗಳ ವಿಂಗಡಣೆ ವಿಚಾರದಲ್ಲೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಸುಮಾರು 500 ಪುಟಗಳ ಪಟ್ಟಿಯಲ್ಲಿ ವಾಹನಗಳ ವಿವರ, ಗ್ರಾಮಾಂತರ ಹಾಗೂ ನಗರ ವಿಳಾಸದ ವಾಹನಗಳು ಮತ್ತು ಮಹಿಳೆಯರ ಹೆಸರಿನಲ್ಲಿರುವ ಆಟೋಗಳ ಮಾಹಿತಿಯನ್ನು ದಾಖಲಿಸಲಾಗಿದೆ. ಕೆಲವು ಆಟೋ ಪಾರ್ಕ್‌ಗಳಿಗೆ ವಾಹನಗಳನ್ನು ವಿಂಗಡಿಸಿರುವ ಕ್ರಮದ ಬಗ್ಗೆಯೂ ಪ್ರಶ್ನೆಗಳಿವೆ ಎಂದರು.

ಆರ್‌ಟಿಒ ಕಚೇರಿಯಲ್ಲಿ ವಾಹನಗಳ ವಿಳಾಸ ಪರಿಶೀಲನೆ ಸೇರಿದಂತೆ ಅಧಿಕೃತ ಕೆಲಸಗಳಲ್ಲಿ ಹೊರಗಿನವರನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಸ್ಪಷ್ಟನೆ ನೀಡಬೇಕು. ಸ್ಥಳೀಯ ವಿದ್ಯಾವಂತ ಯುವಕರಿಗೆ ಇಂತಹ ಕೆಲಸಗಳಲ್ಲಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಮಹಿಳಾ ಆಟೋ ಚಾಲಕರಿಗೂ ಮಂಗಳೂರು ನಗರದಲ್ಲಿ ದುಡಿಯಲು ಸಮಾನ ಅವಕಾಶ ಕಲ್ಪಿಸಬೇಕು. EV ಆಟೋಗಳ ಪರ್ಮಿಟ್ ಹಾಗೂ ವಿಂಗಡಣೆ ಸಮಸ್ಯೆಯನ್ನು ಶೀಘ್ರ ಬಗೆಹರಿಸಿ, ಎಲ್ಲರಿಗೂ ಸಮಾನ ನಿಯಮ ಜಾರಿಗೊಳಿಸಬೇಕು ಎಂದು ಸಂಘದ ಮುಖಂಡರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಮೋಹನ್ ದಾಸ್, ಕಿರಣ್ ಸಿ.ಆರ್., ಮೈಕಲ್, ಮಹೇಂದ್ರ ಹಾಗೂ ಪವನ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!