ಪ್ರಕರಣ–1
👉 ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ
👉 ₹1.36 ಲಕ್ಷ ಮೌಲ್ಯದ 13.69 ಗ್ರಾಂ MDMA ವಶ
ದಿನಾಂಕ 18-08-2026 ರಂದು ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಂಪ್ವೆಲ್ನಿಂದ ನಂತೂರು ಕಡೆಗೆ ತೆರಳುವ ಸರ್ವಿಸ್ ರಸ್ತೆಯ ಬದಿಯಲ್ಲಿ, ಸುಮಾರು 30–35 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಆಟೋ ರಿಕ್ಷಾದಲ್ಲಿ ನಿಷೇಧಿತ ಮಾದಕ ವಸ್ತುವಾದ MDMA ಅನ್ನು ಹೊಂದಿಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಖಚಿತ ಮಾಹಿತಿ ದೊರೆತಿರುತ್ತದೆ.
ಈ ಮಾಹಿತಿಯ ಮೇರೆಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ತೆರಳಿ ದಾಳಿ ನಡೆಸಿ, ಸದರಿ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ದಾಳಿ ಸಂದರ್ಭದಲ್ಲಿ ಆರೋಪಿಯ ವಶದಿಂದ 13.69 ಗ್ರಾಂ ತೂಕದ MDMA ಮಾದಕ ವಸ್ತು, ಅಂದಾಜು ₹1,36,000/- ಮೌಲ್ಯದ MDMA, ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ₹2,94,500/- ಆಗಿರುತ್ತದೆ.

ಬಂಧಿತ ಆರೋಪಿಯ ವಿವರ:
ಮೊಹಮ್ಮದ್ ಇರ್ಷಾದ್, 30 ವರ್ಷ, ತಂದೆ: ಅಬ್ದುಲ್ ಖಾದರ್, ವಾಸ: ಪರನೀರ್ ಪಾಡಿ ಹೌಸ್, ಬಜಲಕಾರಿಯ, ವರ್ಕಾಡಿ ಅಂಚೆ, ವಯಾ ಮಂಜೇಶ್ವರ, ವರ್ಕಾಡಿ, ಕೇರಳ ರಾಜ್ಯ.
ಈ ಕುರಿತು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಅ.ಕ್ರ. 82/2026, ಕಲಂ 8(c), 22(c) ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಕರಣ–2
👉 ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪಿಯ ಬಂಧನ
👉 1.206 ಕೆ.ಜಿ. ಗಾಂಜಾ, KTM ಮೋಟಾರ್ ಸೈಕಲ್ ಹಾಗೂ ಮೊಬೈಲ್ ಫೋನ್ ವಶ
ದಿನಾಂಕ 17-08-2026 ರಂದು ಗಾಂಜಾ ಸೇವನೆ ಮಾಡಿದ ಪ್ರಕರಣದಲ್ಲಿ ಆರೋಪಿತನಾದ ಆಶ್ವಿನ್ ಕ್ಸೇವಿಯರ್ (24) ಎಂಬಾತನನ್ನು ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ, ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ನಿತಿನ್ ಕೃಷ್ಣನ್ ಎಂಬಾತನನ್ನು ತೋರಿಸಿಕೊಡುವುದಾಗಿ ತಿಳಿಸಿರುತ್ತಾನೆ.
ಈ ಹಿನ್ನೆಲೆಯಲ್ಲಿ ದಿನಾಂಕ 18-08-2026 ರಂದು ಕದ್ರಿ ಗ್ರಾಮದ ಪದವು ಮೈದಾನದ ಬಳಿ ಇರುವ ಆಯುರ್ವೇದ ಕ್ಲಿನಿಕ್ನಲ್ಲಿ ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ನಿತಿನ್ ಕೃಷ್ಣನ್ (27) ಎಂಬಾತನನ್ನು ಪತ್ತೆಹಚ್ಚಿ, ಆತನ ವಶದಲ್ಲಿದ್ದ ರೂ 60,000/- ಮೌಲ್ಯದ 1 ಕೆ.ಜಿ. 206 ಗ್ರಾಂ ತೂಕದ ಗಾಂಜಾ, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಹಾಗೂ ಕೆಎಲ್-86-2397 ನೋಂದಣಿ ಸಂಖ್ಯೆಯ KTM ಮೋಟಾರ್ ಸೈಕಲ್ ಅನ್ನು ಮತ್ತು ಆರೋಪಿಯ ಮೊಬೈಲ್ ಫೋನ್ ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಆರೋಪಿಯ ವಿವರ:
ನಿತಿನ್ ಕೃಷ್ಣನ್, 27 ವರ್ಷ, ತಂದೆ: ಕೃಷ್ಣನ್, ಮೂಲ ವಿಳಾಸ: ಚಿರುಪುಝಾ ಗ್ರಾಮ, ತಾಳಿಪರಂಬ ತಾಲೂಕು, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ, ಹಾಲಿ ವಿಳಾಸ: ಶಬರಿ ಅಪಾರ್ಟ್ಮೆಂಟ್, ಕೊಂಚಾಡಿ, ಮಂಗಳೂರು.
ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯ ಮೊ.ನಂ. 104/2026, ಕಲಂ 8(c), 20(b)(ii)(B), 27(b) ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯಾದ ನಿತಿನ್ ಕೃಷ್ಣನ್ ಎಂಬಾತನನ್ನು ದಿನಾಂಕ 18-08-2026 ರಂದು ವಶಕ್ಕೆ ಪಡೆದು ದಸ್ತಗಿರಿ ಕ್ರಮ ಕೈಗೊಳ್ಳಲಾಗಿದ್ದು, ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರರು ಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


