ಕೂಳೂರು ರಸ್ತೆ ಅವ್ಯವಸ್ಥೆ: ಮೂಲಸೌಕರ್ಯಕ್ಕೆ ಆಗ್ರಹ, ಹೋರಾಟದ ಎಚ್ಚರಿಕೆ

ಮಂಗಳೂರು: ನಗರದ ಪ್ರಮುಖ ಪ್ರವೇಶ ದ್ವಾರವಾಗಿರುವ ಕೂಳೂರು ರಸ್ತೆಯ ಅವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಕೊರತೆ ವಿರುದ್ಧ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಷನ್‌ (ರಿ), ಬೆಂಗಳೂರು ದಕ್ಷಿಣ ಕನ್ನಡ ವಿಭಾಗದ ಜಿಲ್ಲಾಧ್ಯಕ್ಷ ಸಂದೀಪ್ ಸಾಲಿಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಳೂರು ರಸ್ತೆ ಮಂಗಳೂರು ನಗರಕ್ಕೆ ಪ್ರವೇಶಿಸುವ ಪ್ರಮುಖ ಮಾರ್ಗವಾಗಿದ್ದು, ವಿಮಾನ ನಿಲ್ದಾಣ, ಹಾರ್ಬರ್ ಹಾಗೂ ಎ.ಜೆ. ಆಸ್ಪತ್ರೆ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಾಗಿದೆ. ಇಂತಹ ಮಹತ್ವದ ರಸ್ತೆಯ ಪರಿಸ್ಥಿತಿ ಮಾತ್ರ ತೀವ್ರ ಹದಗೆಟ್ಟಿರುವುದು ಬೇಸರದ ಸಂಗತಿ ಎಂದು ಅವರು ಹೇಳಿದ್ದಾರೆ.

ದೇಶದ ವಿವಿಧ ಭಾಗಗಳಿಗೆ, ಅದರಲ್ಲೂ ಉತ್ತರ ಪ್ರದೇಶ ಹಾಗೂ ಗುಜರಾತ್‌ನಂತಹ ರಾಜ್ಯಗಳಿಗೆ ತೆರಳಿದಾಗ ಅಲ್ಲಿನ ರಸ್ತೆಗಳ ಅಭಿವೃದ್ಧಿ ಗಮನ ಸೆಳೆಯುತ್ತದೆ. ಆದರೆ ಮಂಗಳೂರು ನಗರದ ಪ್ರಮುಖ ರಸ್ತೆಯೇ ಈ ರೀತಿಯಾಗಿ ಹದಗೆಟ್ಟಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಕೂಳೂರು ನಗರ ವ್ಯಾಪ್ತಿಯಲ್ಲಿದೆಯೇ ಅಥವಾ ಗ್ರಾಮೀಣ ಪ್ರದೇಶದಲ್ಲಿದೆಯೇ ಎಂಬ ಅನುಮಾನ ಮೂಡುವಂತಾಗಿದೆ ಎಂದು ಸಂದೀಪ್ ಸಾಲಿಯಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಇದೇ ರಸ್ತೆಯಲ್ಲಿ ಮಹಿಳೆಯೊಬ್ಬರು ಬಿದ್ದು ಗಾಯಗೊಂಡ ಘಟನೆ ನಡೆದಿತ್ತು. ಘಟನೆ ಬಳಿಕ ಮರುದಿನವೇ ರಸ್ತೆ ಮೇಲೆ ತಾತ್ಕಾಲಿಕವಾಗಿ ಡಾಂಬರು ಹಾಕುವ ಕೆಲಸ ಕೈಗೊಳ್ಳಲಾಗಿತ್ತು. ರಸ್ತೆ ಅವ್ಯವಸ್ಥೆ ವಿಚಾರವಾಗಿ ಟ್ಯಾಕ್ಸಿ ಹಾಗೂ ಗೂಡ್ಸ್ ವಾಹನ ಚಾಲಕರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಟ್ರಾಫಿಕ್‌ ಜಾಮ್‌ನಿಂದಾಗಿ ಯುವಕನೊಬ್ಬ ಗಾಯಗೊಂಡ ಘಟನೆಯೂ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಕೂಳೂರು ರಸ್ತೆ ಪ್ರಮುಖ ಮಾರ್ಗವಾಗಿರುವುದರಿಂದ ಶಾಲಾ ಮಕ್ಕಳಿಗೂ ಸಾಕಷ್ಟು ತೊಂದರೆಯಾಗುತ್ತಿದೆ. ಪ್ರವಾಸ ಸೇರಿದಂತೆ ವಿವಿಧ ಉದ್ದೇಶಗಳಿಗೆ ತೆರಳುವ ಮಕ್ಕಳ ವಾಹನಗಳು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕುತ್ತಿವೆ. ಸಾಮಾನ್ಯ ವಾಹನ ಸವಾರರು ಹಾಗೂ ಟ್ಯಾಕ್ಸಿ ಚಾಲಕರಿಗೂ ಪ್ರತಿದಿನ ಸಮಸ್ಯೆ ಎದುರಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಕೂಳೂರು ವ್ಯಾಪ್ತಿಯ ಸರ್ವಿಸ್ ರಸ್ತೆಯ ಪರಿಸ್ಥಿತಿಯೂ ಸಮರ್ಪಕವಾಗಿಲ್ಲ. ವಿಮಾನ ನಿಲ್ದಾಣದ ಕಡೆಯಿಂದ ಮಂಗಳೂರಿನತ್ತ ತೆರಳಲು ಬಳಸುವ ಸರ್ವಿಸ್ ರಸ್ತೆಯ ಬಗ್ಗೆಯೂ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಈವರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಂದೀಪ್ ಸಾಲಿಯಾನ್ ಆರೋಪಿಸಿದ್ದಾರೆ.

ರಸ್ತೆ ಹಾಗೂ ಮೂಲಸೌಕರ್ಯ ವಿಚಾರದಲ್ಲಿ ಯಾವುದೇ ರಾಜಕೀಯ ಬೇಧಭಾವ ಬೇಡ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷದವರಾಗಿದ್ದರೂ ಜನರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜವಾಬ್ದಾರಿ. ಕೂಳೂರು ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟ ನಡೆಸುವುದು ನಿಶ್ಚಿತ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

SHARE
Loading spinner

2 thoughts on “ಕೂಳೂರು ರಸ್ತೆ ಅವ್ಯವಸ್ಥೆ: ಮೂಲಸೌಕರ್ಯಕ್ಕೆ ಆಗ್ರಹ, ಹೋರಾಟದ ಎಚ್ಚರಿಕೆ”

  1. [7493]rp99: Login dan Daftar Slot Gacor Gampang Menang,rp99 menyediakan akses login dan daftar rp99 apk dengan mudah. Nikmati deposit slot via dana dan pelajari cara main baccarat online. Gabung sekarang! visit: rp99

    Loading spinner
  2. [963]8k8 Login Philippines | Legit Online Slots at GCash Casino,Mag-8k8 login philippines na para sa legit online slots philippines. I-download ang 8k8 app download APK at mag-enjoy sa pinakamabilis na gcash casino ngayon. visit: 8k8

    Loading spinner

Leave a Reply

Your email address will not be published. Required fields are marked *

error: Content is protected !!