ಮಂಜೇಶ್ವರ ಬಡಾಜೆಯಲ್ಲಿ ವಿಜೃಂಭಣೆಯ ಕೆಸರು ಗದ್ದೆ ಉತ್ಸವ: ಮಣ್ಣಿನ ಒಡನಾಟ ಮರಳಿ ಪಡೆಯಲು ಕೃಷಿ ಸಂಸ್ಕೃತಿಯೇ ಮದ್ದು

​ಮಂಜೇಶ್ವರ:ಆಧುನಿಕತೆಯ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ನಮ್ಮ ಶ್ರೀಮಂತ ಕೃಷಿ ಸಂಸ್ಕೃತಿಯನ್ನು ಮರುಜೀವಗೊಳಿಸುವ ಮತ್ತು ಯುವ ಜನತೆಯಲ್ಲಿ ಮಣ್ಣಿನ ಒಡನಾಟವನ್ನು ಮೂಡಿಸುವ ಸದುದ್ದೇಶದಿಂದ ಮಂಜೇಶ್ವರ ಬಡಾಜೆಯಲ್ಲಿ ‘ಕೆಸರು ಗದ್ದೆ’ ಕಾರ್ಯಕ್ರಮವನ್ನು ಅತ್ಯಂತ ಸಡಗರದಿಂದ ಆಯೋಜಿಸಲಾಯಿತು.

​ಮಂಜೇಶ್ವರ ಗ್ರಾಮ ಪಂಚಾಯತ್ ಹಾಗೂ ಕುಟುಂಬಶ್ರೀ ಮಂಜೇಶ್ವರ ಸಿ ಡಿ ಎಸ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲ ತಂಜಳ್, ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದ ಕೃಷಿ ಸಂಸ್ಕೃತಿಯನ್ನು ಹೊಸ ಕಾಲದ ತಂತ್ರಜ್ಞಾನದ ಸಹಕಾರದೊಂದಿಗೆ ಮರಳಿ ತರಲು ಯುವಜನರ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ವಿವಿಧ ಜೀವನಶೈಲಿ ರೋಗಗಳಿಗೆ ನಮ್ಮ ಹಿರಿಯರ ಕೃಷಿ ಪದ್ಧತಿ ಹಾಗೂ ಸಂಸ್ಕೃತಿಯಿಂದ ದೂರ ಸರಿದಿರುವುದೇ ಪ್ರಮುಖ ಕಾರಣ ಎಂದು ಅವರು ಈ ವೇಳೆ ನೆನಪಿಸಿದರು.

​ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಹರ್ಷದ್ ವರ್ಕಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಹರಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಸರೀನಾ ಬಾನು, ಪಂಚಾಯತ್ ಸದಸ್ಯರಾದ ಸಾದಿಕ್, ಸಫಾ ಫಾರೂಕ್, ಇಲ್ಯಾಸ್ ತೂಮಿನಾಡು, ಆಶಾಲತಾ, ಅಬ್ದುಲ್ಲಾ ಗುಡ್ಡಕೇರಿ, ಬೇಬಿಲತಾ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾವ ಹಾಜಿ, ಮಾಜಿ ಸದಸ್ಯ ಯಾದವ ಬಡಾಜೆ, ಮಂಜೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ರಾಮಚಂದ್ರನ್, ಕುಟುಂಬಶ್ರೀ ಜಿಲ್ಲಾ ಎಡಿಎಂಸಿ ಹರಿದಾಸ್ ಹಾಗೂ ಯತೀಶ್ ಕಾಜೂರ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕುಟುಂಬಶ್ರೀ ಸಿ ಡಿ ಎಸ್ ಅಧ್ಯಕ್ಷೆ ಜಯಂತಿ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಕಾರ್ಯದರ್ಶಿ ಅನೀಸ್ ವಂದನಾರ್ಪಣೆಗೈದರು.

ಮಣ್ಣಿನ ಸೊಗಡನ್ನು ಬಿಂಬಿಸಿದ ಈ ವಿನೂತನ ಕೆಸರು ಗದ್ದೆ ಉತ್ಸವವು ಸ್ಥಳೀಯರಲ್ಲಿ ಮತ್ತು ಯುವ ಸಮೂಹದಲ್ಲಿ ಹೊಸ ಹುರುಪು ಮೂಡಿಸಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!