ಆ.31ರಂದು ಪುತ್ತೂರು ಚಲೋ: ನ್ಯಾಯಕ್ಕಾಗಿ ಪ್ರತಿಭಟನೆಗೆ ಕರೆ

ಪುತ್ತೂರು: ದರ್ಬೆಯಲ್ಲಿ ಆ.21ರಂದು ನಡೆದ ಘಟನೆಗೆ ಸಂಬಂಧಿಸಿ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ನ್ಯಾಯಕ್ಕಾಗಿ ಆಗ್ರಹಿಸಿ ಆ.31ರಂದು ‘ಪುತ್ತೂರು ಚಲೋ’ ಪ್ರತಿಭಟನಾ ಮೆರವಣಿಗೆ ಹಾಗೂ ಸಮಾವೇಶ ನಡೆಸುವುದಾಗಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಮುಖಂಡರು ತಿಳಿಸಿದ್ದಾರೆ.

ಗಾಯಗೊಂಡು ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಾಗಿರುವ ಅಂಜನಾ ಪೈ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖಂಡರು, ಅಂಜನಾ ಪೈ ಅವರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಬೇಕು, ಘಟನೆಯ ಹಿಂದಿರುವ ನಿಷೇಧಿತ ಪಿಎಫ್‌ಐ ಸಂಘಟನೆಯ ಸಂಪರ್ಕದ ಬಗ್ಗೆ ತನಿಖೆ ನಡೆಸಬೇಕು ಹಾಗೂ ತಾಯಿಯ ರಕ್ಷಣೆಗೆ ಬಂದ ಪುತ್ರನ ವಿರುದ್ಧ ದಾಖಲಿಸಿರುವ ಕೊಲೆ ಯತ್ನ ಸೇರಿದಂತೆ ಪ್ರಕರಣಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದ ಅವರು, ಆ.31ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತದ ಹಿಂದೂ ಸಮಾಜದವರು, ಯುವಕರು, ವ್ಯಾಪಾರಸ್ಥರು ಹಾಗೂ ಸಂಘಟನೆಗಳ ಪ್ರಮುಖರು ಪುತ್ತೂರು ಚಲೋದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸರ್ಕಾರ ತುಷ್ಟೀಕರಣದ ನೀತಿ ಅನುಸರಿಸುತ್ತಿದೆ:
ದರ್ಬೆ ಘಟನೆಯನ್ನು ಖಂಡಿಸಿದ ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಘಟನಾ ಕಾರ್ಯದರ್ಶಿ ಪ್ರಶಾಂತ್, ಅಂಜನಾ ಪೈ ನೀಡಿರುವ ದೂರಿನ ಸಮಗ್ರ ತನಿಖೆ ನಡೆಸಿ ಹಲ್ಲೆ ಮಾಡಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಪೋಸ್ಟರ್ ಪ್ರಕರಣದಲ್ಲೂ ಕ್ರಮಕ್ಕೆ ಆಗ್ರಹ:
ಪ್ರತಿಭಟನೆಗೆ ಸಂಬಂಧಿಸಿದ ಪೋಸ್ಟರ್ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಆದರೆ ಎಸ್‌ಡಿಪಿಐ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ಪೋಸ್ಟರ್ ಹಾಕಿರುವವರ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಪ್ರಶಾಂತ್ ಆಗ್ರಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!