ಮಂಜೇಶ್ವರ, ಸೆ. 6: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ವಾರ್ಷಿಕ ಪುಣ್ಯತಿಥಿಯು ಮಂಜೇಶ್ವರ ಗಿಳಿವಿಂಡುವಿನಲ್ಲಿ ರಾಷ್ಟ್ರಕವಿಯ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜರುಗಿತು.

ಗೋವಿಂದ ಪೈ ಕಾಲೇಜಿನ ವಿದ್ಯಾರ್ಥಿಗಳು, ಪೈ ಅವರ ಅಭಿಮಾನಿಗಳು, ಸಾಹಿತ್ಯ ಅಭಿಮಾನಿಗಳು, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಸದಸ್ಯರು, ಸಾಹಿತಿಗಳು, ಕಲಾವಿದರು, ಉಪನ್ಯಾಸಕ ವರ್ಗ ಸಹಿತ ಒಂದು ದೊಡ್ಡ ಬಳಗ ಈ ಸಮಾರಂಭಕ್ಕೆ ಸಾಕ್ಷಿಯಾದರು.\

- ಮಾನವತಾವಾದಿ
ನುಡಿ ನಮನ ಸಲ್ಲಿಸಿದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶಿವಶಂಕರ ಅವರು , ಗೋವಿಂದ ಪೈ ಅವರ ಕಾವ್ಯದಲ್ಲಿ ದೇಶಪ್ರೇಮ, ಧಾರ್ಮಿಕ ಸಮನ್ವಯ, ವಿಶ್ವಬಂಧುತ್ವ ಮತ್ತು ಮಾನವೀಯ ಕಾಳಜಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ ಎಂದು ಹೇಳಿದರು.
ಗೋವಿಂದ ಪೈ ಅವರು ತಮ್ಮ ‘ಯೇಸು–ಕೃಷ್ಣ’ ಕವನದಲ್ಲಿ ದಿನವೆರಡರಲ್ಲಿ ಉದಯಿಸುವ ಸೂರ್ಯನು ಒಂದೇ ಎನ್ನುವ ಮೂಲಕ ದೇವರನ್ನು ತಲುಪುವ ಮಾರ್ಗಗಳು ಬೇರೆಬೇರೆ ಇರಬಹುದು; ಆದರೆ ಮಾನವೀಯತೆಯ ಮೂಲ ಒಂದೇ ಎನ್ನುವ ಸಂದೇಶ ನೀಡುತ್ತಾರೆ ಎಂದು ಅವರು ವಿವರಿಸಿದರು.
ಪೈ ಅವರ ತೌಳವ ಮಾತೆ, ಕನ್ನಡಿಗರ ತಾಯಿ ಮತ್ತು ಭಾರತಾಂಬೆಯ ಮಹಿಮೆ ಕವನಗಳು ಅವರಿಗೆ ತನ್ನ ನಾಡು, ನುಡಿ, ದೇಶದ ಕುರಿತು ಇರುವ ಅಭಿಮಾನ ಪ್ರಕಟವಾಗಿದೆ ಎಂದು ಅವರು ಉಲ್ಲೇಖಿಸಿದರು.

ಗೋವಿಂದ ಪೈ ಕಾಲೇಜಿನ ತೃತೀಯ ಪದವಿ ವಿದ್ಯಾರ್ಥಿಗಳಾದ ಶ್ರೇಯ, ಪೂಜಾ, ರಶ್ಮಿತ, ಅನುಪ್ರಭ .ಬಿ.ಆರ್, ಮನಿಷಾ, ದ್ವಿತೀಯ ಪದವಿ ವಿದ್ಯಾರ್ಥಿಗಳಾದ ಕೆ. ಶಿವಾನಿ ಮತ್ತು ಕೃಷ್ಣ ಪ್ರಣಾಮ್ ಅವರು ಗೋವಿಂದ ಪೈ ಅವರ ಬದುಕು, ಸಾಹಿತ್ಯದ ವಿವಿಧ ಮಗ್ಗುಲುಗಳ ಕುರಿತು ವಿಷಯ ಮಂಡಿಸಿದರು.

ಟ್ರಸ್ಟ್ ಕಾರ್ಯದರ್ಶಿ ಡಾ.ಉದಯ ಕುಮಾರ್ ಇರ್ವತ್ತೂರು ಪ್ರಸ್ತಾವನೆಗೈದರು. ಟ್ರಸ್ಟಿಗಳಾದ ಡಿ.ಸಿ.ಚೌಟ, ಕೆ.ತೇಜೋಮಯ, ಸುಭಾಶ್ಚಂದ್ರ ಕಣ್ವತೀರ್ಥ, ಕವಿ ಕೆ. ರಾಧಾಕೃಷ್ಣ ಉಳಿಯತ್ತಡ್ಕ, ನಿವೃತ್ತ ಉಪನ್ಯಾಸಕರಾದ ರಾಜಲಕ್ಷ್ಮಿ, ಯು. ಮಹೇಶ್ವರಿ, ಕಣ್ಣೂರು ಕೇಂದ್ರ ವಿಶ್ವವಿದ್ಯಾನಿಲಯದ ಡಾ.ಕಾವ್ಯ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡು ಘಟಕ ಅಧ್ಯಕ್ಷ ತೆಕ್ಕೆಕೆರೆ ಶಂಕರ ನಾರಾಯಣ ಭಟ್, ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯ ಕಟ್ಟೆ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.

