ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸ್ಪರ್ಧಾತ್ಮಕ ಚಾಲನೆ: ಸರ್ವಿಸ್ ರಸ್ತೆಗಳ ನಿರ್ಲಕ್ಷ್ಯ, ಪ್ರಯಾಣಿಕರ ಪರದಾಟ

​ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಗದಿತ ವೇಳಾಪಟ್ಟಿಯನ್ನು ಪಾಲಿಸುತ್ತಿಲ್ಲ ಎಂಬ ದೂರಿನ ನಡುವೆಯೇ, ಒಂದೇ ಮಾರ್ಗದಲ್ಲಿ ಬಸ್‌ಗಳು ಜೊತೆಯಾಗಿ ಸ್ಪರ್ಧೆಗೆ ಬಿದ್ದು ಚಲಿಸುತ್ತಿರುವುದು ಪ್ರಯಾಣಿಕರಿಗೆ ಭಾರಿ ಕಿರಿಕಿರಿಯನ್ನುಂಟುಮಾಡಿದೆ.

ಕಾಸರಗೋಡು-ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಈ ನಿಯಮ ಉಲ್ಲಂಘನೆಯ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.

​ಕಾಸರಗೋಡಿನಿಂದ ಮಂಗಳೂರಿಗೆ ತೆರಳುವ ಬಸ್‌ಗಳು ಗಡಿಭಾಗವಾದ ತಲಪಾಡಿಗೆ ತಲುಪುತ್ತಿದ್ದಂತೆ, ಇಳಿಯುವ ಪ್ರಯಾಣಿಕರ ವಿವರವನ್ನು ಕಂಡಕ್ಟರ್‌ಗಳು ಕೇಳಿ ತಿಳಿದುಕೊಳ್ಳುತ್ತಾರೆ.

ಪ್ರಯಾಣಿಕರು ಇಳಿಯುವ ಸ್ಥಳಗಳಿಲ್ಲದಿದ್ದರೆ ಸರ್ವಿಸ್ ರಸ್ತೆಯ ಮೂಲಕ ಹೋಗಬೇಕಾದ ಬಸ್‌ಗಳು, ಪ್ರಯಾಣಿಕರನ್ನು ಹತ್ತಿಸಿಕೊಳ್ಳದೆ ರಾಷ್ಟ್ರೀಯ ಹೆದ್ದಾರಿಯಲ್ಲೇ ವೇಗವಾಗಿ ಮುನ್ನುಗ್ಗುತ್ತವೆ.

ಇದರಿಂದಾಗಿ ಸರ್ವಿಸ್ ರಸ್ತೆಯ ಬಸ್ ತಂಗುದಾಣಗಳಲ್ಲಿ ಗಂಟೆಗಟ್ಟಲೆ ಬಸ್‌ಗಾಗಿ ಕಾಯುವ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

​ಇದರ ಜೊತೆಗೆ ‘ಪ್ರಿಯದರ್ಶಿನಿ ಉಚಿತ ಪ್ರಯಾಣ’ ಸೌಲಭ್ಯವನ್ನು ಬಸ್ ಸಿಬ್ಬಂದಿ ತಮ್ಮ ಔದಾರ್ಯದಂತೆ ಕಾಣುತ್ತಿದ್ದು, ಬಸ್ ತಂಗುದಾಣಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಬಸ್ ನಿಲ್ಲಿಸದೆ ತೆರಳುತ್ತಿದ್ದಾರೆ ಎಂದು ಮಹಿಳಾ ಪ್ರಯಾಣಿಕರು ಆರೋಪಿಸಿದ್ದಾರೆ.

​ತಲಪಾಡಿಯಿಂದ ಕಾಸರಗೋಡುವರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸರಿಯಾದ ಸಮಯವನ್ನು ಪಾಲಿಸುವಂತೆ ಮಾಡಬೇಕು, ಸರ್ವಿಸ್ ರಸ್ತೆಯಲ್ಲೇ ಸಂಚರಿಸಿ ಎಲ್ಲ ನಿಲ್ದಾಣಗಳಲ್ಲೂ ಬಸ್ ನಿಲ್ಲಿಸುವಂತೆ ಮೋಟಾರು ವಾಹನ ಇಲಾಖೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!