ಕೆಎಸ್‌ಆರ್‌ಟಿಸಿ ಬಸ್‌ಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣದ ಗಮನ ಹರಿಸುವುದು ಅಗತ್ಯ: ಎಂ.ಎಲ್. ಅಶ್ವಿನಿ

ಕಾಸರಗೋಡು: ನಿನ್ನೆ ನೀಲೇಶ್ವರ ಬಳಿ, ಪಡನಕ್ಕಾಡ್ ಕೆಎಸ್‌ಆರ್‌ಟಿಸಿ ಪ್ರಿಯದರ್ಶಿನಿ ಬಸ್ ಪ್ಲಾಟ್‌ಫಾರ್ಮ್ ಕುಸಿದು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವುದು‌, ಕಾಸರಗೋಡಿನಲ್ಲಿ ಸರ್ವೀಸ್ ನಡೆಸುವ ಎಲ್ಲಾ ಸರಕಾರಿ ಬಸ್‌ಗಳ ಫಿಟ್‌ನೆಸ್ ಹಾಗೂ ಸುರಕ್ಷತೆಯ ಬಗ್ಗೆ ಕಾಸರಗೋಡು ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರು ಮತ್ತು ಉದ್ಯೋಗಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಬಸ್ ಗಳ ತುರ್ತು ಸುರಕ್ಷತಾ ಪರಿಶೀಲನೆ ನಡೆಸಬೇಕು.

ಕೇರಳದ ಅನೇಕ ಹಳೆಯ ಸರಕಾರಿ ಬಸ್‌ಗಳು ಕಾಸರಗೋಡು ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿವೆ. ಏತನ್ಮಧ್ಯೆ, ಕಾಸರಗೋಡು ಜಿಲ್ಲೆಗೆ ಸರ್ವೀಸ್ ನಡೆಸುತ್ತಿರುವ ಕರ್ನಾಟಕದ ಸಾಮಾನ್ಯ ಬಸ್‌ಗಳು, ಕೇರಳದ ಕೆಎಸ್‌ಆರ್‌ಟಿಸಿ ಬಸ್‌ಗಳಿಗಿಂತಲೂ ಸುರಕ್ಷಿತ ಮತ್ತು ಹೆಚ್ಚು ಆಧುನಿಕವಾಗಿದೆ. ಹೆಚ್ಚಿನ ಕೇರಳ ಸರಕಾರಿ ಬಸ್‌ಗಳು ತುಕ್ಕು ಹಿಡಿದ ಸ್ಥಿತಿಯಲ್ಲಿವೆ. ಹಳೆಯ ಮತ್ತು ತುಕ್ಕು ಹಿಡಿದ ಬಸ್‌ಗಳು ರಸ್ತೆಗೆ ಇಳಿಯುವುದನ್ನು ತಡೆಯಲು ಮೋಟಾರ್ ವಾಹನ ಇಲಾಖೆ ತಕ್ಷಣ ತಯಾರಾಗಬೇಕು. ಅಸ್ತಿತ್ವದಲ್ಲಿರುವ ವಿಮೆ ಮತ್ತು ಫಿಟ್‌ನೆಸ್ ಪ್ರಮಾಣಪತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಇನ್ನಷ್ಟು ಪರಿಶೀಲನೆ ಅಗತ್ಯವಿದೆ.

ವಿಶೇಷವಾಗಿ ಪ್ರಿಯದರ್ಶಿನಿ ಬಸ್‌ಗಳನ್ನು ಹೆಚ್ಚಿನ ಪ್ರಯಾಣಿಕರು ಅವಲಂಬಿಸಿರುವ ನಿಟ್ಟಿನಲ್ಲಿ, ಅಂತಹ ಬಸ್‌ಗಳ ಸುರಕ್ಷತಾ ತಪಾಸಣೆಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸಬೇಕು. ಅಪಾಯಗಳು ಸಂಭವಿಸಿದ ನಂತರ ಪರೀಕ್ಷೆಗಳನ್ನು ನಡೆಸುವ ಬದಲು, ಮುಂಚಿತವಾಗಿ ಪತ್ತೆಹಚ್ಚುವ ಕಾರ್ಯವನ್ನು ಕೆಎಸ್‌ಆರ್‌ಟಿಸಿಯಲ್ಲಿ ಜಾರಿಗೆ ತರಬೇಕಿದೆ. ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಎಂ.ಎಲ್. ಅಶ್ವಿನಿ ಆಗ್ರಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!