ಮಂಗಳೂರು: ಕರ್ನಾಟಕದಲ್ಲಿ ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವುದು ತುಳುನಾಡಿನ ಜನರ ಬಹುಕಾಲದ ಆಶಯಕ್ಕೆ ದೊರೆತ ಮಾನ್ಯತೆಯಾಗಿದೆ. ಈ ನಿರ್ಧಾರವನ್ನು ಹೃದಯಪೂರ್ವಕವಾಗಿ ಸ್ವಾಗತಿಸುವುದಾಗಿ ‘ಗಿವ್ ಬ್ಯಾಕ್ ನಾಗರಿಕ ಅಭಿಯಾನ’ದ ಬೆಂಗಳೂರು ಸ್ಥಾಪಕಾಧ್ಯಕ್ಷ ಹಾಗೂ 2021-22ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಶಿವಪ್ರಸಾದ್ ಶೇಟ್ ಹೇಳಿದರು.

ತುಳು ಭಾಷೆಗೆ ಆಡಳಿತಾತ್ಮಕ ಬಳಕೆಯ ಅವಕಾಶ ದೊರೆತಿರುವುದು ಮಹತ್ವದ ಬೆಳವಣಿಗೆಯಾಗಿದೆ. ಜನಪ್ರತಿನಿಧಿಗಳು ತಮ್ಮ ಸ್ಥಳೀಯ ಸಮಸ್ಯೆಗಳನ್ನು ಹಾಗೂ ಜನರ ಬೇಡಿಕೆಗಳನ್ನು ತುಳು ಭಾಷೆಯಲ್ಲೇ ಪರಿಣಾಮಕಾರಿಯಾಗಿ ಮಂಡಿಸಲು ಇದರಿಂದ ಹೆಚ್ಚಿನ ಅವಕಾಶ ಸಿಗಲಿದೆ. ತುಳು ಭಾಷೆಯ ಆಡಳಿತಾತ್ಮಕ ಬಳಕೆಗೆ ಅಗತ್ಯ ವ್ಯವಸ್ಥೆಗಳನ್ನು ರೂಪಿಸುವ ಮೂಲಕ ಈ ನಿರ್ಧಾರವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದರು.

ಕರಾವಳಿ ಪ್ರದೇಶವು ದೇಶಕ್ಕೆ ವೈದ್ಯರು, ಎಂಜಿನಿಯರ್ಗಳು, ಉದ್ಯಮಿಗಳು, ಚಾರ್ಟರ್ಡ್ ಅಕೌಂಟೆಂಟ್ಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿಭಾವಂತರನ್ನು ನೀಡಿದೆ. ತುಳುನಾಡಿನ ಜನರು ದೇಶ-ವಿದೇಶಗಳಲ್ಲಿ ಯಶಸ್ಸು ಸಾಧಿಸುವುದರ ಜೊತೆಗೆ ತಾವು ಬೆಳೆದ ಸಮಾಜಕ್ಕೆ ಮರಳಿ ಕೊಡುಗೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲೂ ತುಳು ಭಾಷೆಗೆ ದೊರೆತ ಅಧಿಕೃತ ಮಾನ್ಯತೆ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.

ತುಳು ಭಾಷೆಯ ಮಾನ್ಯತೆಗಾಗಿ ಹಲವು ಸಂಘಟನೆಗಳು, ಸಾಹಿತಿಗಳು, ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ನಡೆಸಿದ ನಿರಂತರ ಪ್ರಯತ್ನಗಳ ಫಲವಾಗಿ ಈ ಹಂತ ತಲುಪಲಾಗಿದೆ. ತುಳು ಭಾಷೆ ಮತ್ತು ಸಂಸ್ಕೃತಿಯ ವಿಚಾರವನ್ನು ಶಾಂತಿಯುತ ಹಾಗೂ ಸೃಜನಾತ್ಮಕ ರೀತಿಯಲ್ಲಿ ಜನರ ಗಮನಕ್ಕೆ ತರುವ ಕಾರ್ಯಗಳು ನಡೆದಿವೆ ಎಂದರು.
ಮುಂದಿನ ಹಂತದಲ್ಲಿ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿಯೂ ಕ್ರಮ ಕೈಗೊಳ್ಳಬೇಕು. ತುಳುವಿಗೆ ದೊರೆತಿರುವ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಭಾಷೆಯ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಶಿವಪ್ರಸಾದ್ ಶೇಟ್ ಹೇಳಿದರು.

