ಕಾಸರಗೋಡು: ಕುಟುಂಬಸ್ಥರು ಮನೆಗೆ ಬೀಗ ಹಾಕಿ ಹೊರಹೋದ ಬಿಡುವನ್ನೇ ಕಾಯುತ್ತಿದ್ದ ಕಳ್ಳರು ಆದೂರು ಬಳ್ಳಕ್ಕಾಡ್‌ನಲ್ಲಿ ಹಾಡಹಗಲೇ ಮನೆಯ ಬಾಗಿಲು ಮುರಿದು 7.5 ಪವನ್ ಚಿನ್ನಾಭರಣ ದೋಚಿದ್ದಾರೆ.

ಆಟೋ ಚಾಲಕ ಸದಾನಂದ ಎಂಬುವವರ ಮನೆಯಲ್ಲಿ ಈ ಕಳವು ಸಂಭವಿಸಿದೆ. ಪತ್ನಿ ಆಸ್ಪತ್ರೆಗೆ, ಮಗ ತರಗತಿಗೆ ಹಾಗೂ ಸದಾನಂದ ಅವರು ಆಟೋ ಬಾಡಿಗೆಗೆ ತೆರಳಿದ್ದಾಗ ಮನೆಗೆ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು, ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ್ದಾರೆ. ಬಳಿಕ ಕಪಾಟನ್ನು ಜಾಲಾಡಿ ಅದರಲ್ಲಿದ್ದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದಾರೆ.

ಸದಾನಂದ ಅವರು ಮನೆಗೆ ಮರಳಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತರ ದೂರಿನ ಮೇರೆಗೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು, ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

