ಕಾಸರಗೋಡು: ದೆಹಲಿಯಲ್ಲಿ ಎಂಡಿಎಂಎ ತಯಾರಿಸಿ ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಗೆ ಪೂರೈಸುತ್ತಿದ್ದ ಅಂತರರಾಷ್ಟ್ರೀಯ ಮಾದಕದ್ರವ್ಯ ಜಾಲವನ್ನು ಕಣ್ಣೂರು ಸಿಟಿ ಪೊಲೀಸರು ಭೇದಿಸಿದ್ದಾರೆ.

ನೈಜೀರಿಯಾದ ಬೆನೆಲೊ ಲಿಲಿಯನ್ ಹಾಗೂ ಕ್ಯಾಮರೂನ್‌ನ ಫಿಲೋಮೆನ ಚೌನ್‌ಸೆಲಿನ್ ಬಂಧಿತ ವಿದೇಶಿ ಮಹಿಳೆಯರು.
ನ್ಯೂಮಾಹಿಯಲ್ಲಿ 0.6 ಗ್ರಾಂ ಎಂಡಿಎಂಎ ಜೊತೆ ಸಿಕ್ಕಿಬಿದ್ದ ಆರೋಪಿಯ ಸುಳಿವು ಆಧರಿಸಿ, ಹಂತ-ಹಂತವಾಗಿ ತನಿಖೆ ನಡೆಸಿದ ಪೊಲೀಸರು ಹಲವು ಮಧ್ಯವರ್ತಿಗಳನ್ನು ಬಂಧಿಸಿದ್ದರು.

ಈ ವೇಳೆ ದೆಹಲಿ ಮೂಲದ ಉತ್ಪಾದನಾ ಜಾಲದ ಮಾಹಿತಿ ಲಭಿಸಿತ್ತು. ತಲಶ್ಶೇರಿ ಎಎಸ್‌ಪಿ ಡಾ. ಎಂ. ನಂದಗೋಪಾಲ್ ನೇತೃತ್ವದ ತಂಡ ದೆಹಲಿಯಲ್ಲಿ 10 ದಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದೆ.

ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಚ್ಚಿಟ್ಟು ಸರಬರಾಜು ಮಾಡುತ್ತಿದ್ದ ಈ ಜಾಲದಿಂದ 20 ಬ್ಯಾಂಕ್ ಖಾತೆಗಳು ಹಾಗೂ 50ಕ್ಕೂ ಹೆಚ್ಚು ನಕಲಿ ಆಧಾರ್ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ.

