ಮಂಜೇಶ್ವರ: ಉದ್ಯಾವರ ಪರಿಸರದಲ್ಲಿ ಬುಧವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಕಳ್ಳರು ಸಹಸ್ರಾರು ಮೌಲ್ಯದ ಸೊತ್ತು ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.



ಉದ್ಯಾವರದ ಬಿ.ಎಸ್. ನಗರದಲ್ಲಿರುವ ತುಕರಾಂ ಎಂಬುವವರ ಅಂಗಡಿಯ ಶಟರ್ ಮುರಿದು ಒಳನುಗ್ಗಿದ ಕಳ್ಳರು, ಡ್ರಾವರ್ನಲ್ಲಿದ್ದ 3,000 ರೂಪಾಯಿ ನಗದು ಹಣ ಮತ್ತು ಬೆಲೆಬಾಳುವ ಸಿಗರೇಟ್ಗಳನ್ನು ಕದ್ದು ಪರಾರಿಯಾಗಿದ್ದಾರೆ.
ಇಷ್ಟಕ್ಕೇ ನಿಲ್ಲದ ಕಳ್ಳರ ಸರಣಿ ಕೃತ್ಯ, ಅದೇ ಪರಿಸರದಲ್ಲಿರುವ ಯುನೈಟೆಡ್ ಬಿ.ಎಸ್. ಕ್ಲಬ್, ಉದ್ಯಾವರ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಸಾದಿಕ್ ಎಂಬುವವರ ರೇಡಿಯೇಟರ್ ರಿಪೇರಿ ಅಂಗಡಿ ಹಾಗೂ ಮೋನು ಎಂಬುವವರ ಹಣ್ಣಿನ ಅಂಗಡಿಗಳ ಶಟರ್ಗಳನ್ನು ಮುರಿದು ಒಳಗಿದ್ದ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಗೊಳಿಸಿದ್ದಾರೆ.

ಆದರೆ ಅದೃಷ್ಟವಶಾತ್ ಈ ಮೂರು ಸ್ಥಳಗಳಿಂದ ಯಾವುದೇ ನಗದು ಹಾಗೂ ಮೌಲ್ಯಯುತ ವಸ್ತುಗಳು ಕಳ್ಳರ ಕೈಗೆ ಸಿಕ್ಕಿಲ್ಲ.
ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಾಥಮಿಕ ವಿವರಗಳನ್ನು ಕಲೆಹಾಕಿದ್ದಾರೆ.


ಇತ್ತೀಚೆಗೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳರ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು ಹಾಗೂ ವರ್ತಕರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ರಾತ್ರಿ ವೇಳೆಯಲ್ಲಿ ಸೂಕ್ತ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಬಲಪಡಿಸಬೇಕೆಂದು ಸ್ಥಳೀಯ ನಿವಾಸಿಗಳು ಹಾಗೂ ವ್ಯಾಪಾರಿಗಳು ತೀವ್ರವಾಗಿ ಆಗ್ರಹಿಸಿದ್ದಾರೆ.

