ಮಂಗಳೂರು: ಕರಾವಳಿಯ ವಿಶಿಷ್ಟ ಹುಲಿವೇಷ ಪರಂಪರೆಯ ಇತಿಹಾಸ, ಸಾಂಸ್ಕೃತಿಕ ಮಹತ್ವ ಹಾಗೂ ಈ ಕಲೆಯನ್ನು ಜೀವಂತವಾಗಿರಿಸಿರುವ ಕಲಾವಿದರು ಮತ್ತು ಸಮುದಾಯದ ಬದುಕನ್ನು ಪರಿಚಯಿಸುವ ‘ಎಂಕ್ಲೆನ ಪಿಲಿ’ (ನಮ್ಮ ಹುಲಿ) ಸಾಕ್ಷ್ಯಚಿತ್ರ ಸೆ.26ರಂದು ಮಂಗಳೂರಿನ ಭಾರತ್ ಸಿನೆಮಾಸ್‌ನಲ್ಲಿ ಸಂಜೆ 3.45 ತೆರೆಕಾಣಲಿದೆ.

ಹುಲಿವೇಷದ ಹಿಂದಿರುವ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಕಲಾವಿದರ ಬದುಕಿನ ವಿವಿಧ ಆಯಾಮಗಳನ್ನು ದಾಖಲಿಸಿರುವ ಈ ಸಾಕ್ಷ್ಯಚಿತ್ರ ಪ್ರೇಕ್ಷಕರ ಮುಂದೆ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿದೆ. ಸಾಕ್ಷ್ಯಚಿತ್ರದ ಪ್ರಥಮ ಪ್ರದರ್ಶನಕ್ಕೆ ಸಾಂಸ್ಕೃತಿಕ ಸಮುದಾಯದ ಸದಸ್ಯರು, ಸಹಯೋಗಿಗಳು, ಸ್ನೇಹಿತರು, ಕುಟುಂಬದವರು ಹಾಗೂ ನಗರದ ಗಣ್ಯರು ಸಾಕ್ಷಿಯಾಗಲಿದ್ದಾರೆ.

ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಸಾಕ್ಷ್ಯಚಿತ್ರದ ಪ್ರಥಮ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಚಿತ್ರದ ನಿರ್ಮಾಪಕ ಶ್ರೀಕಾಂತ್ ಕಾಮತ್ ಹಾಗೂ ನಿರ್ದೇಶಕ ಶ್ರೀಜಿತ್ ಕಾಮತ್ ಅವರ ನೇತೃತ್ವದಲ್ಲಿ ಸಾಕ್ಷ್ಯಚಿತ್ರ ಮೂಡಿಬಂದಿದೆ.

