ಕೊಯಮತ್ತೂರಿನಲ್ಲಿ ಕನಿಷ್ಠ ವೇತನ, ಕಾರ್ಮಿಕರ ಸುರಕ್ಷತೆ ಕುರಿತು ಅಧ್ಯಯನ …… !

ಮಂಗಳೂರು: ಕಾರ್ಮಿಕರಿಗೆ ದೊರೆಯುತ್ತಿರುವ ಕನಿಷ್ಠ ವೇತನ, ಆರೋಗ್ಯ ಮತ್ತು ಸುರಕ್ಷತಾ ಸೌಲಭ್ಯಗಳು, ಮಹಿಳಾ ಸುರಕ್ಷತೆ ಹಾಗೂ ಕೆಲಸದ ವಾತಾವರಣದ ಕುರಿತು ಅಧ್ಯಯನ ನಡೆಸಲು ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಸಚಿವ ಸ್ಥಾನಮಾನ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ಅವರು ಕೊಯಮತ್ತೂರಿನ ವಿವಿಧ ಕೈಗಾರಿಕಾ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಯಮತ್ತೂರಿನಲ್ಲಿ ಕಟ್ಟಡ ಕಾರ್ಮಿಕರು ಹಾಗೂ ನಗರ ಪ್ರದೇಶದಲ್ಲಿ ದುಡಿಯುತ್ತಿರುವ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಅವರು, ಅವರಿಗೆ ದೊರೆಯುತ್ತಿರುವ ಕನಿಷ್ಠ ವೇತನ, ಕೆಲಸದ ಸ್ವರೂಪ ಮತ್ತು ಕಾರ್ಮಿಕರ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದುಕೊಂಡರು. ಬಳಿಕ ಗಾರ್ಮೆಂಟ್ ಕಾರ್ಖಾನೆಗೆ ಭೇಟಿ ನೀಡಿ ಕಾರ್ಮಿಕರ ವೇತನ, ಹಾಜರಾತಿ ವ್ಯವಸ್ಥೆ, ಆರೋಗ್ಯ, ಕೆಲಸದ ಪರಿಸ್ಥಿತಿ ಹಾಗೂ ಮಹಿಳಾ ಸುರಕ್ಷತೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಪರಿಶೀಲನೆ ನಡೆಸಿದರು.

ಆಟೋಮೊಬೈಲ್ ಬಿಡಿಭಾಗಗಳ ಉತ್ಪಾದನೆ ಮತ್ತು ವಿತರಣೆಯಲ್ಲಿ ತೊಡಗಿರುವ ಎಲ್‌ಜಿಬಿ ಸಂಸ್ಥೆಗೂ ಭೇಟಿ ನೀಡಿದ ಶಹೀದ್ ತೆಕ್ಕಿಲ್, ಅಲ್ಲಿನ ಕಾರ್ಮಿಕರಿಗೆ ನೀಡಲಾಗುತ್ತಿರುವ ವೇತನ, ಕನಿಷ್ಠ ವೇತನದ ಅನುಷ್ಠಾನ, ಕೆಲಸದ ವಾತಾವರಣ, ಆರೋಗ್ಯ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಅಧಿಕಾರಿಗಳು ಮತ್ತು ಸಂಸ್ಥೆಯ ಪ್ರತಿನಿಧಿಗಳಿಂದ ಮಾಹಿತಿ ಪಡೆದರು. ಸಂಸ್ಥೆಯಲ್ಲಿ ಸುಮಾರು 14 ಸಾವಿರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಕುರಿತು ಮಾಹಿತಿ ಪಡೆಯಲಾಯಿತು.

ಅಧ್ಯಯನ ಪ್ರವಾಸದ ವೇಳೆ ಕಾರ್ಮಿಕ ಇಲಾಖೆಯ ರಘುರಾಮ್, ಸಹಾಯಕ ನಿರ್ದೇಶಕ ಎಸ್. ಕಣ್ಣನ್, ಕಾರ್ಮಿಕ ನಿರೀಕ್ಷಕ ಪಿ. ಸೈಯದ್ ಕುಮಾರ್, ಸಹಾಯಕ ಕಾರ್ಮಿಕ ನಿರೀಕ್ಷಕ ಅಝರುದ್ದೀನ್ ಹಾಗೂ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಕನಿಷ್ಠ ವೇತನ ನೀತಿ ರೂಪಿಸುವ ಸಂದರ್ಭದಲ್ಲಿ ಇತರ ರಾಜ್ಯಗಳ ಕೈಗಾರಿಕೆಗಳಲ್ಲಿ ಕಾರ್ಮಿಕರ ವೇತನ, ಆರೋಗ್ಯ, ಸುರಕ್ಷತೆ ಮತ್ತು ಕೆಲಸದ ಪರಿಸ್ಥಿತಿಗಳನ್ನು ಅಧ್ಯಯನ ಮಾಡುವುದು ಸಹಕಾರಿಯಾಗಲಿದೆ. ಈ ಅಧ್ಯಯನದಿಂದ ದೊರೆತ ಮಾಹಿತಿಯನ್ನು ರಾಜ್ಯದ ಕಾರ್ಮಿಕರ ಹಿತದೃಷ್ಟಿಯಿಂದ ಪರಿಶೀಲಿಸಲಾಗುವುದು ಎಂದು ಶಹೀದ್ ತೆಕ್ಕಿಲ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!