ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಸಂಚಾಲಕರಾಗಿ ಹಾಗೂ ಅಧ್ಯಾಪಕರಾಗಿ ಮೀಂಜ ಪ್ರದೇಶದ ಶೈಕ್ಷಣಿಕ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ ದಿವಂಗತ ಯಂ. ರಾಮಕೃಷ್ಣರಾವ್ ಅವರ 21ನೇ ಪುಣ್ಯತಿಥಿಯ ಅಂಗವಾಗಿ ಇಂದು ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ರಂಗಮಂಟಪದಲ್ಲಿ ಸಂಸ್ಮರಣೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.

ಶಾಲಾ ಸಂಚಾಲಕ ಯಂ. ರಾಮಕೃಷ್ಣರಾವ್ ಸಂಸ್ಮರಣಾ ವೇದಿಕೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಾರಾಯಣ ದೇಲಂಪಾಡಿ ವಹಿಸಿದ್ದರು.

ಶಾಲಾ ಆಡಳಿತ ಸಲಹೆಗಾರರಾದ ಶ್ರೀ ಶ್ರೀಧರ ರಾವ್ ಆರ್.ಎಂ. ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ಸೋದೆ ಸಮೂಹ ಶಿಕ್ಷಣ ಸಂಸ್ಥೆ, ಉಡುಪಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ. ಡಾ. ರಾಧಾಕೃಷ್ಣ ಎಸ್. ಐತಾಳ್ ಹಾಗೂ ಎಸ್.ವಿ.ವಿ.ಎಚ್.ಎಸ್.ಎಸ್. ಮೀಯಪದವಿನ ಸಂಚಾಲಕರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಬೆಂಗಳೂರಿನ ನಿರ್ದೇಶಕ ಶ್ರೀ ಎಂ.ಜಿ. ಬಾಲಸುಬ್ರಹ್ಮಣ್ಯ ಹಾಗೂ ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಮತ್ತು ಅಂಗ್ಲಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಜಗದೀಶ್ ಶೆಟ್ಟಿ ಎಲಿಯಾಣ ಅವರನ್ನು ಸನ್ಮಾನಿಸಲಾಯಿತು.ಸನ್ಮಾನ ಕಾರ್ಯಕ್ರಮವನ್ನು ಅಧ್ಯಾಪಕರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಹಾಗೂ ಅಶೋಕ್ ಕುಮಾರ್ ಡಿ ನಿರ್ವಹಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ದಿವಂಗತ ಯಂ. ರಾಮಕೃಷ್ಣರಾವ್ ಅವರು ಮೀಯಪದವು ಹಾಗೂ ಮೀಂಜ ಪ್ರದೇಶದ ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅವರು ವಹಿಸಿದ ಪಾತ್ರ ಹಾಗೂ ಶಾಲೆಯ ಅಭಿವೃದ್ಧಿಗೆ ನೀಡಿದ ಸೇವೆಯನ್ನು ಕೊಂಡಾಡಿದರು.

ಇದೆ ಸಂದರ್ಭದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕಂಪೆನಿ ಮೀಯಪದವಿನ ವಿದ್ಯಾಸಂಸ್ಥೆಗಳಿಗೆ ನೀಡಿದ 2 ಶಾಲಾ ಬಸ್ಸುಗಳನ್ನು ಕಂಪೆನಿಯ ಎಚ್ ಆರ್ ವಿಭಾಗದ ನಿರ್ದೇಶಕರಾದ ಎಂ ಜಿ ಬಾಲಸುಬ್ರಹ್ಮಣ್ಯ ಉದ್ಘಾಟಿಸಿದರು.


ಶಾಲಾ ಸಂಚಾಲಕಿ ಶ್ರೀಮತಿ ರಾಜೇಶ್ವರಿ ಎಸ್. ರಾವ್ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಶಾಲಾ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳಿಂದ “ಗಾನ ಲಹರಿ” ಎಂಬ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಶಾಲಾ ಪ್ರಧಾನ ಅಧ್ಯಾಪಕರಾದ ಶ್ರೀ ಡಿ.ಎಸ್. ಅರವಿಂದಾಕ್ಷ ಭಂಡಾರಿ ವಂದಿಸಿದರು.ಅಧ್ಯಾಪಕರಾದ ರಾಮಚಂದ್ರ ಕೆ ಎಂ ನಿರೂಪಿಸಿದರು.
ರಕ್ಷಕ-ಶಿಕ್ಷಕ ಸಂಘ, ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ, ಹಳೆ ವಿದ್ಯಾರ್ಥಿ ಸಂಘ, ವಿದ್ಯಾರ್ಥಿಗಳು ಹಾಗೂ ಶಾಲೆಯ ಹಿತೈಷಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


