ಹುಲಿವೇಷ ಕೇವಲ ವೇಷವಲ್ಲ, ತುಳುನಾಡಿನ ಸಂಸ್ಕೃತಿ: ಕ್ಷಿತಿಜ್ ಕಾಮತ್

ಮಂಗಳೂರು: ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ವಿಶಿಷ್ಟ ಕಲೆಯಾದ ಹುಲಿವೇಷದ ಇತಿಹಾಸ, ಆಚರಣೆ, ಕಲಾವಿದರ ಪರಿಶ್ರಮ ಹಾಗೂ ಅದರ ಹಿಂದಿರುವ ಭಾವನಾತ್ಮಕ ನಂಟನ್ನು ಪರಿಚಯಿಸುವ ಉದ್ದೇಶದಿಂದ ‘ಎಂಕ್ಲೆನ ಪಿಲಿ–ನಮ್ಮ ಹುಲಿ’ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ ಎಂದು ನಿರ್ದೇಶಕ ಕ್ಷಿತಿಜ್ ಕಾಮತ್ ಹೇಳಿದರು.

ನಗರದ ಭಾರತ್ ಸಿನೆಮಾಸ್ ನಲ್ಲಿ ಶನಿವಾರ ಸಾಕ್ಷ್ಯ ಚಿತ್ರದ ಬಳಿಕ ಮಾತನಾಡಿದ ಅವರು , ಮಂಗಳೂರಿನಲ್ಲಿ ಹುಟ್ಟಿ ಡಿಜಿಟಲ್ ಫಿಲ್ಮ್‌ಮೇಕಿಂಗ್ ಹಾಗೂ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಕ್ಷಿತಿಜ್ ಕಾಮತ್, ಮಂಗಳೂರಿಗಾಗಿ ಹಾಗೂ ಮಂಗಳೂರಿನ ಕಥೆಯನ್ನು ಹೇಳುವ ಚಿತ್ರವೊಂದನ್ನು ನಿರ್ಮಿಸಬೇಕು ಎಂಬುದು ತಮ್ಮ ಬಹುಕಾಲದ ಕನಸಾಗಿತ್ತು. ವೈಲ್ಡ್‌ಲೈಫ್ ಫಿಲ್ಮ್‌ಮೇಕರ್ ಆಗಿರುವ ಹಿನ್ನೆಲೆಯಲ್ಲಿ ‘ಹುಲಿ’ಯೊಂದಿಗೆ ತಮ್ಮ ವೃತ್ತಿಯ ನಂಟನ್ನೂ ಹುಲಿವೇಷದ ಸಾಂಸ್ಕೃತಿಕ ಹಿನ್ನೆಲೆಯನ್ನೂ ಬೆಸೆದು ಈ ಚಿತ್ರ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಚಿತ್ರದಲ್ಲಿ ಕರ್ನಾಟಕದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿರುವ ಹುಲಿಗಳ ಕುರಿತ ಮಾಹಿತಿಯ ಜತೆಗೆ, ಕರಾವಳಿ ಹಾಗೂ ತುಳುನಾಡಿನಲ್ಲಿ ಹುಲಿಗೆ ಇರುವ ಸಾಂಸ್ಕೃತಿಕ ಮಹತ್ವವನ್ನು ದಾಖಲಿಸಲಾಗಿದೆ. ಹುಲಿವೇಷದ ಸಿದ್ಧತೆ, ಬಣ್ಣಗಾರಿಕೆ, ಆಚರಣೆ, ಕಲಾವಿದರ ಶ್ರಮ, ಪರಂಪರೆ ಹೇಗೆ ಕಾಲಕ್ರಮೇಣ ಬದಲಾಗಿದೆ ಹಾಗೂ ಮುಂದಿನ ಪೀಳಿಗೆಗೆ ಅದನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದನ್ನು ಚಿತ್ರದಲ್ಲಿ ವಿವರಿಸಲಾಗಿದೆ. ಹಿರಿಯ ಹುಲಿವೇಷ ಕಲಾವಿದ ಬಜ್ಜಲಕೇರಿ ಕಮಲಾಕ್ಷ ಅವರ ತಂಡದ ಸುಮಾರು ಶತಮಾನದ ಪರಂಪರೆಯನ್ನೂ ಸಾಕ್ಷ್ಯಚಿತ್ರದಲ್ಲಿ ದಾಖಲಿಸಲಾಗಿದೆ.

ವಿಧಾನ ಪರಿಷತ್ ಸದಸ್ಯ ವೇದವ್ಯಾಸ್ ಕಾಮತ್ ಮಾತನಾಡಿ, ಹುಲಿವೇಷವು ಕೇವಲ ಮನರಂಜನೆಯ ಕಲೆಯಲ್ಲ, ತುಳುನಾಡಿನ ಸಂಸ್ಕೃತಿ, ಆಚರಣೆ ಮತ್ತು ಹಿರಿಯರು ರೂಪಿಸಿಕೊಂಡ ಪರಂಪರೆಯ ಪ್ರತಿಬಿಂಬವಾಗಿದೆ ಎಂದರು. ಹುಲಿವೇಷದ ಹಿಂದೆ ಇರುವ ಕಲಾವಿದರ ಪರಿಶ್ರಮ ಹಾಗೂ ಅದರ ಸಾಂಸ್ಕೃತಿಕ ಹಿನ್ನೆಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಸಾಕ್ಷ್ಯಚಿತ್ರದ ಪ್ರಯತ್ನ ಮಹತ್ವದ್ದಾಗಿದೆ ಎಂದು ಹೇಳಿದರು.

ಸಾಕ್ಷ್ಯಚಿತ್ರ ವೀಕ್ಷಿಸಿದ ಪ್ರೇಕ್ಷಕರು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಹುಲಿವೇಷದ ಹಿಂದೆ ಇರುವ ಇತಿಹಾಸ, ಕಲಾವಿದರ ನೋವು-ನಲಿವು, ಶ್ರಮ ಹಾಗೂ ಪರಂಪರೆಯ ಆಳವನ್ನು ಚಿತ್ರ ಪರಿಣಾಮಕಾರಿಯಾಗಿ ಪರಿಚಯಿಸಿದೆ ಎಂದು ಅಭಿಪ್ರಾಯಪಟ್ಟರು. ಹುಲಿವೇಷದ ಬಗ್ಗೆ ಇದುವರೆಗೆ ತಿಳಿಯದ ಹಲವು ವಿಚಾರಗಳು ಚಿತ್ರದಿಂದ ತಿಳಿದುಬಂದಿದ್ದು, ತುಳುನಾಡಿನ ಈ ವಿಶಿಷ್ಟ ಸಂಸ್ಕೃತಿಯನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವ ಪ್ರಯತ್ನವಾಗಲಿ ಎಂದು ಹಾರೈಸಿದರು.

ಹಿರಿಯ ಹುಲಿವೇಷ ಕಲಾವಿದ ಬಜ್ಜಲಕೇರಿ ಕಮಲಾಕ್ಷ ಅವರು, ತಮ್ಮ ತಂಡದ ದೀರ್ಘಕಾಲದ ಪರಂಪರೆಯನ್ನು ದಾಖಲಿಸಿರುವುದಕ್ಕೆ ಚಿತ್ರತಂಡಕ್ಕೆ ಧನ್ಯವಾದ ಸಲ್ಲಿಸಿದರು. ವೈಲ್ಡ್‌ಲೈಫ್ ಫೋಟೋಗ್ರಾಫರ್‌ಗಳು ಹಾಗೂ ಚಿತ್ರತಂಡದ ಪರಿಶ್ರಮವನ್ನು ಶ್ಲಾಘಿಸಿದ ಅವರು, ಹುಲಿವೇಷದ ಪರಂಪರೆ ಮುಂದುವರಿಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಹುಲಿವೇಷದ ಕುರಿತು ವಿವಿಧ ಆಯಾಮಗಳನ್ನು ಪರಿಚಯಿಸುವ 45 ನಿಮಿಷಗಳ ಸಾಕ್ಷ್ಯಚಿತ್ರದಲ್ಲಿ ಹಳೆಯ ಪರಂಪರೆ, ಪ್ರಸ್ತುತ ಆಚರಣೆ ಹಾಗೂ ಭವಿಷ್ಯದ ಸವಾಲುಗಳ ಕುರಿತು ಚರ್ಚಿಸಲಾಗಿದೆ. ತುಳುನಾಡಿನ ಸಾಂಸ್ಕೃತಿಕ ಪರಂಪರೆಯೊಂದನ್ನು ದೃಶ್ಯರೂಪದಲ್ಲಿ ದಾಖಲಿಸುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶ ಚಿತ್ರತಂಡದ್ದಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!