ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾಸರಗೋಡು, ಬೇಕಲ -ಹೊಸದುರ್ಗ ಉಪಜಿಲ್ಲಾ ಸಮ್ಮೇಳನ ಉದ್ಘಾಟನೆ

ಮಕ್ಕಳಲ್ಲಿ ಕನಸು ಬಿತ್ತುವ , ಮನೋಬಲ ತುಂಬುವ ಮಾತೃ ಹೃದಯದ ಶಿಕ್ಷಕರಾಗಿ: ಶಿಕ್ಷಣಾಧಿಕಾರಿ ಎಂ. ಶಶಿಧರ

ಕಾಸರಗೋಡು: ಶಾಲೆಗಳಲ್ಲಿ ಇಂದು ಬೇಕಾಗಿರುವುದು ಮಕ್ಕಳಲ್ಲಿ ಭವಿಷ್ಯದ ಕನಸು ಬಿತ್ತುವ, ಮನೋಬಲ ತುಂಬುವ ತಾಯಿ ಹೃದಯದ ಶಿಕ್ಷಕರು ಎಂದು ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ. ಎಂ ಹೇಳಿದರು.


ಕಾಸರಗೋಡಿನ ‘ ಕನ್ನಡ ಅಧ್ಯಾಪಕ ಭವನ ‘ದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾಸರಗೋಡು, ಬೇಕಲ- ಹೊಸದುರ್ಗ ಉಪಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇರಳ ಸಹಿತ ದೇಶದ ಅನೇಕ ಕೇಂದ್ರಗಳಲ್ಲಿ ರೋಬೋಟ್ ಶಿಕ್ಷಕರಿಂದ ಶಿಕ್ಷಣ ಪ್ರಯೋಗ ನಡೆಯುತ್ತಿದೆ. ಸಾಮಾನ್ಯವಾಗಿ ರೋಬೋಟ್ ಶಿಕ್ಷಕರು ಇತರ ಶಿಕ್ಷಕರಿಗಿಂತ ಬುದ್ದಿವಂತರು ಮತ್ತು ಅಸಾಮಾನ್ಯರು ಇರುತ್ತಾರೆ. ಆದರೆ ರೋಬೋಟ್ ಶಿಕ್ಷಕರಿಗೆ ಹೃದಯ ಇರುವುದಿಲ್ಲ. ನಮ್ಮ ಶಿಕ್ಷಕರಿಗೆ ದುಗುಡ ತುಂಬಿದ ವಿದ್ಯಾರ್ಥಿಗಳ‌ ಮನಸು ತಿಳಿಯಲು ಸಾಧ್ಯ ಎಂದು ಅವರು ಹೇಳಿದರು.
ಕನ್ನಡದ ಅನೇಕ ಅಧ್ಯಾಪಕರು ಕೂಡ ತಮ್ಮ‌ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳುಹಿಸಲು ತಯಾರಿಲ್ಲ. ನಮಗೆ‌ ಅನ್ನ, ಉದ್ಯೋಗ, ಒಳ್ಳೆಯ ಜೀವನ ಒದಗಿಸಿದ ಕನ್ನಡಕ್ಕೆ ನಮ್ಮ ಕೊಡುಗೆ ಏನು? ಎಂದು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಇದು. ಅನೇಕ ಮಂದಿ ಶಿಕ್ಷಕರಿಗೆ ಸಮಸ್ಯೆ ಎದುರಾದಾಗ ಮಾತ್ರ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆ ನೆನಪಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.


ನಮ್ಮ ಹುದ್ದೆ, ಅಸ್ತಿತ್ವ ಉಳಿಸಿಕೊಳ್ಳಲು ನಾವು ಶಾಲೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವಿಭಾಗ ಮತ್ತು ವಲಸೆ ಕಾರ್ಮಿಕರ ಬಡವರ ಮಕ್ಕಳನ್ನು ನಂಬಿದ್ದೇವೆ. ನಾವು ತಯಾರಿಸುವ ಅಡುಗೆಯ ಮೇಲೆ ನಮಗೆ ನಂಬಿಕೆ ಇಲ್ಲದಿದ್ದರೆ ಹೇಗೆ ಎಂದು ಅವರು ಪ್ರಶ್ನಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘಟನೆಯ ಬೇಕಲ- ಹೊಸದುರ್ಗ ಉಪಜಿಲ್ಲಾ ಅಧ್ಯಕ್ಷ ವಿಠಲ ಅಡ್ವಳ ಅವರು, ಸರಕಾರಿ, ಅನುದಾನಿತ ಶಾಲೆಗಳಲ್ಲಿ ಕಲಿಯುವ ಮಕ್ಕಳು ಜೀವನ ಕೌಶಲ, ಸ್ಪರ್ಧಾತ್ಮಕ ಮನೋಭಾವವನ್ನು ಇತರರಿಗಿಂತ ಹೆಚ್ಚು ರೂಢಿಸಿಕೊಳ್ಳುತ್ತಾರೆ ಎಂದು ಹೇಳಿದರು.


ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ಪುಂಡರೀಕಾಕ್ಷ ಆಚಾರ್ಯ, ಕಾಸರಗೋಡು ಕನ್ನಡ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಸತ್ಯನಾರಾಯಣ ರಾವ್, ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ವಿಶಾಲಾಕ್ಷ ಪುತ್ರಕಳ ಮುಖ್ಯಅತಿಥಿಗಳಾಗಿದ್ದರು.ನಿವೃತ್ತ ಶಿಕ್ಷಣ ಉಪನಿರ್ದೇಶಕ ಡಿ. ಮಹಾಲಿಂಗೇಶ್ವರ ರಾಜ್,ಅಧ್ಯಾಪಕರ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಸುಕೇಶ ಎ., ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ,ಉಪಜಿಲ್ಲಾ ಉಪಾಧ್ಯಕ್ಷೆ ವಿಜಯಕುಮಾರಿ ಶುಭಾಶಂಸನೆಗೈದರು. ಉಪಾಧ್ಯಕ್ಷೆ ಯಶೋದ ಕೆ.ಎ, ನಿವೃತ್ತ ಮುಖ್ಯ ಶಿಕ್ಷಕಿ ಶೋಭಾರಾಣಿ ಟೀಚರ್ ಉಪಸ್ಥಿತರಿದ್ದರು. ಕಾಸರಗೋಡು, ಬೇಕಲ- ಹೊಸದುರ್ಗ ಉಪಜಿಲ್ಲೆಯ ಎಲ್ಎಸ್ಎಸ್, ಯು ಎಸ್ ಎಸ್ ವಿಜೇತ ವಿದ್ಯಾರ್ಥಿಗಳನ್ನು ಸಮ್ಮೇಳನದಲ್ಲಿ ಅಭಿನಂದಿಸಲಾಯಿತು.
ಕೇಂದ್ರ ಸಮಿತಿ ಅಧಿಕೃತ ವಕ್ತಾರ ಬಾಬು. ಕೆ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾಸರಗೋಡು ಉಪಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ.ಯಂ ಸ್ವಾಗತಿಸಿದರು. ಕೇಂದ್ರ ಸಮಿತಿ ಕೋಶಾಧಿಕಾರಿ ಪ್ರದೀಪ್ ಕೆ.ವಿ ವಂದಿಸಿದರು. ಕಾಸರಗೋಡು ಉಪಜಿಲ್ಲಾ ಕೋಶಾಧಿಕಾರಿ ಸುರೇಖಾ ಕೆ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಾಸರಗೋಡು ಉಪಜಿಲ್ಲಾ ಅಧ್ಯಕ್ಷ ಕುಶ ಪಿ. ಎಲ್ ಅವರ ಅಧ್ಯಕ್ಷತೆಯಲ್ಲಿ ಪ್ರತಿನಿಧಿ ಸಮ್ಮೇಳನ ನಡೆಯಿತು. ಕೇಂದ್ರ ಸಮಿತಿ ಜತೆ ಕಾರ್ಯದರ್ಶಿ ವಿನೋದ್ ರಾಜ್ ಪಿ.ಕೆ ,ಉಪಜಿಲ್ಲಾ ಉಪಾಧ್ಯಕ್ಷೆ ರೋಹಿತಾಕ್ಷಿ ಉಪಸ್ಥಿತರಿದ್ದರು. ವರದಿ ,ಲೆಕ್ಕಪತ್ರ ಮಂಡನೆಯ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!