- ವಕ್ರದಂತ ಚಿಕಿತ್ಸೆ ಎಂದರೇನು?
ಹಲ್ಲುಗಳು, ದವಡೆಗಳು ಹಾಗೂ ಮುಖದ ಮೂಳೆಗಳ ಸರಿಯಾದ ಜೋಡಣೆ ಮತ್ತು ಸಮತೋಲನವನ್ನು ಕಾಪಾಡುವ ಚಿಕಿತ್ಸೆಯೇ ವಕ್ರದಂತ ಚಿಕಿತ್ಸೆ. ಇದು ಹಲ್ಲುಗಳ ಸೌಂದರ್ಯಕ್ಕೆ ಮಾತ್ರ ಸೀಮಿತವಾಗದೆ, ದವಡೆ, ಮುಖದ ಸ್ನಾಯುಗಳು ಮತ್ತು ಕೀಲುಗಳ ಆರೋಗ್ಯ ಹಾಗೂ ಸರಿಯಾದ ಬೆಳವಣಿಗೆಯನ್ನೂ ಕಾಪಾಡುತ್ತದೆ. - ವಕ್ರದಂತ ಚಿಕಿತ್ಸಕ ಎಂದರೆ ಯಾರು?
ಐದು ವರ್ಷಗಳ ದಂತ ವೈದ್ಯಕೀಯ ಪದವಿಯ ನಂತರ ಮೂರು ವರ್ಷಗಳ ವಿಶೇಷ ವ್ಯಾಸಂಗ ಮತ್ತು ತರಬೇತಿ ಪಡೆದು ಹಲ್ಲು, ದವಡೆ, ಮುಖದ ಮೂಳೆಗಳು, ಸ್ನಾಯುಗಳು ಹಾಗೂ ಮುಖದ ಸೌಂದರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವ ತಜ್ಞರೇ ವಕ್ರದಂತ ಚಿಕಿತ್ಸಕರು ಅಥವಾ ಆರ್ಥೋಡಾಂಟಿಸ್ಟ್ಗಳು. - ಯಾವಾಗ ವಕ್ರದಂತ ಚಿಕಿತ್ಸಕರನ್ನು ಭೇಟಿ ಮಾಡಬೇಕು?
ಹಲ್ಲುಗಳ ನಡುವೆ ಅಂತರವಿದ್ದರೆ, ಹಲ್ಲುಗಳು ತಿರುಗಿಕೊಂಡಿದ್ದರೆ, ಮೇಲಿನ ಮತ್ತು ಕೆಳಗಿನ ಹಲ್ಲುಗಳು ಸರಿಯಾಗಿ ಸೇರದಿದ್ದರೆ, ದವಡೆಗಳ ಗಾತ್ರದಲ್ಲಿ ಅಸಮತೋಲನ, ಮುಖದ ಕೀಲು ಅಥವಾ ಸ್ನಾಯು ನೋವು, ಉಸಿರಾಟದ ಸಮಸ್ಯೆಗಳು ಅಥವಾ ಸೀಳು ತುಟಿ ಮುಂತಾದ ಸಮಸ್ಯೆಗಳಿದ್ದಾಗ ಆರ್ಥೋಡಾಂಟಿಸ್ಟ್ರನ್ನು ಭೇಟಿ ಮಾಡಬೇಕು. - ಮಕ್ಕಳಿಗೆ ವಕ್ರದಂತ ಚಿಕಿತ್ಸೆ ಅಗತ್ಯವೇ?
ಮಕ್ಕಳ ಬೆಳವಣಿಗೆಯ ಸಮಯದಲ್ಲಿ ದವಡೆ ಮತ್ತು ಮುಖದ ಮೂಳೆಗಳಲ್ಲಿ ಬದಲಾವಣೆಗಳು ಸಹಜ. ಅಗತ್ಯವಿದ್ದಲ್ಲಿ ಬೆಳವಣಿಗೆಯ ಹಂತದಲ್ಲಿಯೇ ಚಿಕಿತ್ಸೆ ಆರಂಭಿಸುವುದರಿಂದ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಹಲವು ವಕ್ರದಂತ ಸಮಸ್ಯೆಗಳನ್ನು ತಡೆಗಟ್ಟಬಹುದು. - ಹೊಸ ತಂತ್ರಜ್ಞಾನಗಳ ಪ್ರಗತಿ ಹೇಗಿದೆ?
ಕ್ಲಿಯರ್ ಅಲೈನರ್ಗಳು ಆಧುನಿಕ ವಕ್ರದಂತ ಚಿಕಿತ್ಸೆಯ ಪ್ರಮುಖ ಆವಿಷ್ಕಾರಗಳಲ್ಲಿ ಒಂದಾಗಿವೆ. ಕಂಪ್ಯೂಟರ್ ತಂತ್ರಜ್ಞಾನ ಮತ್ತು ಡಿಜಿಟಲ್ ಸ್ಕ್ಯಾನರ್ಗಳ ಸಹಾಯದಿಂದ ಹಲ್ಲುಗಳ ಚಲನೆಯನ್ನು ಯೋಜಿಸಿ, ಪಾರದರ್ಶಕ ಅಲೈನರ್ಗಳ ಮೂಲಕ ಕ್ರಮೇಣ ಹಲ್ಲುಗಳನ್ನು ಸರಿಯಾದ ಸ್ಥಾನಕ್ಕೆ ತರಲಾಗುತ್ತದೆ. - ಚಿಕಿತ್ಸೆ ಕೇವಲ ಸೌಂದರ್ಯಕ್ಕೆ ಮಾತ್ರವೇ?
ಇಲ್ಲ. ಸೌಂದರ್ಯವರ್ಧನೆಯ ಜೊತೆಗೆ ಸರಿಯಾದ ಕಚ್ಚುವಿಕೆ, ಜಗಿಯುವಿಕೆ, ಉಸಿರಾಟ, ದವಡೆ-ಕೀಲುಗಳ ಆರೋಗ್ಯ ಹಾಗೂ ಮುಖದ ಸ್ನಾಯುಗಳ ಸಮತೋಲನವನ್ನು ಸುಧಾರಿಸುವಲ್ಲಿಯೂ ವಕ್ರದಂತ ಚಿಕಿತ್ಸೆ ಪ್ರಮುಖ ಪಾತ್ರ ವಹಿಸುತ್ತದೆ. - ವಕ್ರದಂತ ಅರಿವು ವಾರದಲ್ಲಿ ಕಾರ್ಯಕ್ರಮಗಳೇನು?
ಅಕ್ಟೋಬರ್ 5ರಿಂದ 11ರವರೆಗೆ ನಡೆಯುವ ವಕ್ರದಂತ ಅರಿವು ವಾರದ ಅಂಗವಾಗಿ ಮಂಗಳೂರಿನ ವಕ್ರದಂತ ಚಿಕಿತ್ಸಕರ ಸಂಘವು ಶಾಲೆಗಳಲ್ಲಿ ಉಚಿತ ತಪಾಸಣಾ ಶಿಬಿರಗಳು ಹಾಗೂ ವಿವಿಧ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮಂಗಳೂರಿನ ದಂತ ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ಕಾರ್ಯಕ್ರಮಗಳು ನಡೆಯಲಿದ್ದು, ಸಾಮಾಜಿಕ ಜಾಲತಾಣದ ಪ್ರಸಿದ್ಧ ವ್ಯಕ್ತಿಗಳೂ ಭಾಗವಹಿಸಲಿದ್ದಾರೆ. - ‘Go Green’ ಎಂಬ ಉದ್ಘೋಷಣೆಯ ಅರ್ಥವೇನು?
ಕ್ಲಿಯರ್ ಅಲೈನರ್ಗಳು ಪ್ಲಾಸ್ಟಿಕ್ನಿಂದ ತಯಾರಾಗುವುದರಿಂದ ಬಳಕೆಯ ನಂತರ ತ್ಯಾಜ್ಯವಾಗುತ್ತವೆ. ಆದ್ದರಿಂದ ಅವುಗಳನ್ನು ಮರುಬಳಕೆ ಅಥವಾ ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ಒಳಪಡಿಸುವ ಮೂಲಕ ಪರಿಸರ ಸ್ನೇಹಿ ಕ್ರಮಗಳನ್ನು ಉತ್ತೇಜಿಸುವುದೇ ‘Go Green’ ಉದ್ದೇಶ. - ಜನರು ತಿಳಿದಿರಬೇಕಾದ ಮುಖ್ಯ ಅಂಶವೇನು?
ಸುಂದರ ನಗುವಿನ ಮೊದಲ ಹೆಜ್ಜೆ ನಿಜವಾದ ಸಮಸ್ಯೆಯನ್ನು ಗುರುತಿಸುವುದು. ಅದರ ಕಾರಣವನ್ನು ತಿಳಿದು, ಅರ್ಹ ಮತ್ತು ನುರಿತ ವಕ್ರದಂತ ತಜ್ಞರನ್ನು ಸಂಪರ್ಕಿಸಿ, ಅವರ ಸಲಹೆಯಂತೆ ಚಿಕಿತ್ಸೆ ಪಡೆಯುವುದರಿಂದ ಆರೋಗ್ಯಕರ ಹಾಗೂ ಆಕರ್ಷಕ ನಗುವನ್ನು ಪಡೆಯಬಹುದು.

ಡಾ. ಹನೀಶ್ ಕಿರಣ್ ಪಿ.ಟಿ.
ಮುಖಾಂಗ ಮೂಳೆ ಮತ್ತು ವಕ್ರದಂತ ವಿನ್ಯಾಸ ವಿಭಾಗ
ಯೆನೆಪೋಯ ದಂತ ಮಹಾವಿದ್ಯಾಲಯ
ಮಂಗಳೂರು



