ಉಪ್ಪಳ: ಶಂಪಾ ಪ್ರತಿಷ್ಠಾನ ಬೆಂಗಳೂರು ಇದರ ಆಶ್ರಯದಲ್ಲಿ ಕೀರ್ತಿ ಶೇಷರಾದ ಪ್ರೊ. ಕೆ .ವಿ ತಿರುಮಲೇಶ್ ,ಪ್ರೊ.ಟಿ ಕೇಶವ ಭಟ್ಟ ಪ್ರೊ.ಕೆ.ಟಿ ಗಟ್ಟಿ ಸಾಹಿತಿ- ಸಾಹಿತ್ಯ- ಸಂಸ್ಮರಣಾ ಕಾರ್ಯಕ್ರಮವು ಪೊಸಡಿ ಗುಂಪೆಯ ನಿಸರ್ಗಧಾಮದಲ್ಲಿ ನಡೆಯಿತು. ಹಿರಿಯ ವಿದ್ವಾಂಸ ಡಾ. ತಾಳ್ತಜೆ ವಸಂತಕುಮಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರೊ .ಕೆ.ವಿ ತಿರುಮಲೇಶ್, ಪ್ರೊ ಟಿ. ಕೇಶವ ಭಟ್ಟ, ಪ್ರೊ ಕೆ.ಟಿ ಗಟ್ಟಿ ಇವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾದುದು. ಅವರ ಸಾಹಿತ್ಯ, ಕನ್ನಡ ಸೇವೆ ಅನನ್ಯ. ಅವರ ಸಾಧನೆ, ಸಾಹಿತ್ಯದ ಮೆಲುಕು ,ಸಂಸ್ಮರಣೆ ಮುಂದಿನ ಪೀಳಿಗೆಗೆ ಪ್ರೇರಕ, ಮಾರ್ಗದರ್ಶಕ ಎಂದು ಡಾ.ತಾಳ್ತಜೆ ವಸಂತ ಕುಮಾರ ಹೇಳಿದರು .ಶಂಪಾ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ. ಪಿ. ಎನ್ ಮೂಡಿತ್ತಾಯ ಅಧ್ಯಕ್ಷತೆ ವಹಿಸಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್ ಸುಬ್ಬಯಕಟ್ಟೆ, ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಪತ್ರಕರ್ತ ಅಚ್ಯುತ ಚೇವಾರು ಮುಖ್ಯ ಅತಿಥಿಗಳಾಗಿದ್ದರು.

ಬಳಿಕ ವಿಚಾರ ಸಂಕಿರಣ ನಡೆಯಿತು.’ ಕನ್ನಡ ಸಾಹಿತ್ಯಕ್ಕೆ ಕೆ.ವಿ ತಿರುಮಲೇಶರ ಕೊಡುಗೆ’ಯ ಕುರಿತು ವಿಶ್ರಾಂತ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ,’ಜನಪದ ಸಾಹಿತ್ಯ- ಶಾಸ್ತ್ರ ಸಾಹಿತ್ಯಕ್ಕೆ ಪ್ರೊ .ಟಿ. ಕೇಶವ ಭಟ್ಟರ ಕೊಡುಗೆ ‘ಯ ಕುರಿತು ಸಾಹಿತಿ,ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್, ಪ್ರೊ. ಕೆ.ಟಿ ಗಟ್ಟಿ ಅವರ ಕಾದಂಬರಿಗಳ ಕುರಿತು ಕವಯತ್ರಿ ,ಶಿಕ್ಷಕಿ ಕವಿತಾ ಕೂಡ್ಲು ಉಪನ್ಯಾಸ ನೀಡಿದರು.


ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ , ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಅವರ ಅಧ್ಯಕ್ಷತೆಯಲ್ಲಿ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ರಾಜೇಂದ್ರ ಬಜಕ್ಕೂಡ್ಲು ಸಮಾರೋಪ ಭಾಷಣ ಮಾಡಿದರು. ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಸುಭಾಷ್ ಪೆರ್ಲ ಅತಿಥಿಗಳಾಗಿದ್ದರು. ಶ್ರೀಮತಿ ನಿರ್ಮಲಾ ಕೆ .ವಿ ತಿರುಮಲೇಶ್ ಮತ್ತು ಶ್ರೀಮತಿ ಲಕ್ಷ್ಮಿ ಪಾರ್ವತಿ .ಬಿ ಇವರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ವಿಶಾಲಾಕ್ಷ ಪುತ್ರಕಳ,ಡಾ.ಶಾರದ ಬೆಂಗಳೂರು, ಮಂಜುನಾಥ ಡಿ ಎಸ್ ಬೆಂಗಳೂರು ಅತಿಥಿ ಅಭ್ಯಾಗತರ ಪರಿಚಯ ಮಾಡಿದರು.

ನಿರ್ಮಲಾ ತಿರುಮಲೇಶ್ ಪ್ರಾರ್ಥನೆ ಹಾಡಿದರು. ಶಂಪಾ ಪ್ರತಿಷ್ಠಾನದ ಅಧ್ಯಕ್ಷೆ ಡಾ .ಪ್ರಮೀಳಾ ಮಾಧವ ಸ್ವಾಗತಿಸಿದರು.ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕಿ ಡಾ.ಯು ಮಹೇಶ್ವರಿ ವಂದಿಸಿದರು. ಡಾ .ಎಸ್.ಎಲ್ ಮಂಜುನಾಥ್ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು.


