ಸಂಘಟನೆ ಸಮಾಜದ ಅಶಕ್ತ ವಿಭಾಗಕ್ಕೆ ಬೆನ್ನೆಲುಬಾಗಿ, ಬೆಂಬಲವಾಗಿ ನಿಲ್ಲಬೇಕು : ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್

ಮಂಗಳೂರು: ರಾಮಕ್ಷತ್ರಿಯ ಸಂಘ ಜೆಪ್ಪು, ಮೊರ್ಗನ್ ಗೇಟ್, ಮಂಗಳೂರಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಯೋಗೀಶ್ ಕುಮಾರ್ ಜೆಪ್ಪು ಹಾಗೂ ನೂತನ ಪದಾಧಿಕಾರಿಗಳಿಗೆ ಕನ್ನಡ ಭವನ ಮತ್ತು ಗ್ರಂಥಾಲಯದ ವತಿಯಿಂದ ಅಭಿನಂದನಾ ಸಮಾರಂಭ ನಡೆಯಿತು.

ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ವಾಮನ್ ರಾವ್ ಅವರ ಸಾರಥ್ಯದಲ್ಲಿ, ಕನ್ನಡ ಭವನ ಪ್ರಕಾಶನ ಮತ್ತು ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷೆ ರೇಖಾ ಸುದೇಶ್ ರಾವ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕರ್ನಾಟಕ ಸರಕಾರದ ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್ ಕಾರ್ಯಕ್ರಮ ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಶಾಲು, ಹಾರ, ಅಭಿನಂದನಾ ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯೋಗೀಶ್ ಕುಮಾರ್ ಜೆಪ್ಪು ಅವರು ಕಲೆ, ಸಾಹಿತ್ಯ, ಯಕ್ಷಗಾನ, ಕ್ರೀಡೆ, ಧಾರ್ಮಿಕ ಹಾಗೂ ವಿವಿಧ ಸಂಘಟನಾತ್ಮಕ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಲಯನ್ಸ್ ಕ್ಲಬ್‌ನಂತಹ ಸಂಸ್ಥೆಗಳಲ್ಲಿಯೂ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿರುವ ಅವರು ಎಲ್ಲರನ್ನೂ ಒಗ್ಗೂಡಿಸಿ ಸಂಘದ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ ಎಂದರು.

ಕಾಸರಗೋಡಿನಿಂದ ಆಗಮಿಸಿರುವ ಡಾ. ವಾಮನ್ ರಾವ್ ಬೇಕಲ್ ಅವರು ಮಂಗಳೂರಿನ ಸಂಘಟನೆಯ ನೂತನ ಪದಾಧಿಕಾರಿಗಳನ್ನು ಗೌರವಿಸಿರುವುದು ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸಮಾಜಮುಖಿ ಕಾರ್ಯಗಳಿಗೆ ಎಲ್ಲ ರೀತಿಯ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ. ಹಿರಿಯರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಯುವಕರನ್ನು ಒಳಗೊಂಡಂತೆ ಎಲ್ಲರನ್ನು ಸಂಘಟಿಸಿ, ಸಮರ್ಥ ಕಾರ್ಯಯೋಜನೆಗಳನ್ನು ರೂಪಿಸುವ ಮೂಲಕ ಸಂಘವನ್ನು ಮುನ್ನಡೆಸಬೇಕು ಎಂದು ಶುಭ ಹಾರೈಸಿದರು.

ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿಕಟಪೂರ್ವ ಅಧ್ಯಕ್ಷ ಮುರಳೀಧರ್ ಸಿ.ಎಚ್. ಅವರು ನೂತನ ಸಮಿತಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಶುಭ ಹಾರೈಸಿದರು.

ನೂತನ ಸಮಿತಿಯ ಪದಾಧಿಕಾರಿಗಳು ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿ, ಈ ಗೌರವವು ಮುಂದಿನ ದಿನಗಳಲ್ಲಿ ಸಂಘದ ಗುರುತರ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ಪ್ರೇರಣೆ ನೀಡಿದೆ ಎಂದು ತಿಳಿಸಿದರು.

ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷೆ ರೇಖಾ ಸುದೇಶ್ ಹಾಗೂ ಕಾರ್ಯಾಧ್ಯಕ್ಷ ಉಮೇಶ್ ರಾವ್ ಕುಂಬ್ಳೆ ಕಾರ್ಯಕ್ರಮ ನಿರ್ವಹಿಸಿದರು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಸಮಾಜಕ್ಕೆ ಸಂಘಟನೆಯ ಕೊಡುಗೆ ನೀಡಿದ ಡಾ. ಲಕ್ಷ್ಮಣಾನಂದ ಸ್ವಾಮೀಜಿಯವರನ್ನು ಸ್ಮರಿಸಿ, ಪರಮಪೂಜ್ಯ ಸದ್ಗುರು ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರ ಸ್ವಾಮೀಜಿಯವರ ಅನುಗ್ರಹವನ್ನು ಯಾಚಿಸಲಾಯಿತು. ಸಂಘದ ವತಿಯಿಂದ ವಂದನಾರ್ಪಣೆ ಸಲ್ಲಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!