ಟ್ರಂಪ್ ಸೋಲಿನಿಂದ ಮೋದಿ ಪಾಠ ಕಲಿಯಬೇಕು: ಜಾನ್ ಬ್ರಿಟ್ಟಾಸ್

ನವದೆಹಲಿ: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ಗೆ ಉಂಟಾದ ಹಿನ್ನಡೆಯ ಕುರಿತು ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್, ಟ್ರಂಪ್‌ಗೆ ಎದುರಾದ ರಾಜಕೀಯ ಹಿನ್ನಡೆಯಿಂದ ಪ್ರಧಾನಿ ನರೇಂದ್ರ ಮೋದಿ ಪಾಠ ಕಲಿಯಬೇಕು ಎಂದು ಹೇಳಿದ್ದಾರೆ.

“ಮೈ ಫ್ರೆಂಡ್ ಟ್ರಂಪ್‌ಗೆ ಉಂಟಾದ ಹಿನ್ನಡೆ ಏಕೆ ಸಂಭವಿಸಿತು ಎಂಬುದನ್ನು ಮೋದಿ ಅರ್ಥಮಾಡಿಕೊಳ್ಳಬೇಕು. ಇರಾನ್‌ನ ಪರಮೋಚ್ಚ ನಾಯಕನ ಹತ್ಯೆಯಾದಾಗಲೂ ಭಾರತ ಆರಂಭದಲ್ಲಿ ಪ್ರತಿಕ್ರಿಯಿಸಲಿಲ್ಲ. ಪ್ಯಾಲೆಸ್ತೀನ್ ವಿಚಾರದಲ್ಲೂ ಭಾರತ ಮೌನ ವಹಿಸಿತ್ತು. ಶತಕೋಟ್ಯಾಧಿಪತಿಗಳ ಪರವಾದ ನೀತಿ ಮತ್ತು ವಿಭಜನೆಯ ರಾಜಕೀಯ ಅಮೆರಿಕದಲ್ಲಿ ಹಿನ್ನಡೆಗೆ ಕಾರಣವಾಗಿವೆ. ಇವುಗಳಿಂದ ಮೋದಿ ಪಾಠ ಕಲಿಯಬೇಕು” ಎಂದು ಬ್ರಿಟ್ಟಾಸ್ ಹೇಳಿದರು.

ಭಾರತದಲ್ಲಿ ಸುಮಾರು 20 ಕೋಟಿ ಮುಸ್ಲಿಮರಿದ್ದರೂ, ಜನಸಂಖ್ಯೆಗೆ ಅನುಗುಣವಾಗಿ ಅವರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿದೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.

“ಟ್ರಂಪ್ ಎಲ್ಲಿ ತಪ್ಪು ಮಾಡಿದರು ಎಂಬುದನ್ನು ಮೋದಿ ಪ್ರಶ್ನಿಸಿಕೊಳ್ಳಬೇಕು. ಆ ತಪ್ಪುಗಳನ್ನು ಭಾರತದಲ್ಲಿ ಪುನರಾವರ್ತಿಸದಂತೆ ಎಚ್ಚರಿಕೆ ವಹಿಸಬೇಕು” ಎಂದು ಬ್ರಿಟ್ಟಾಸ್ ವ್ಯಂಗ್ಯವಾಡಿದರು.ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಲೇವಡಿ ಮಾಡಿದ ಬ್ರಿಟ್ಟಾಸ್, “ಅಮಿತ್ ಶಾ ಬಹಳ ದಿನಗಳಿಂದ ದೈಹಿಕವಾಗಿ ಹೆಚ್ಚು ಚಟುವಟಿಕೆಯಿಂದಿಲ್ಲ. ಹಾಗಾಗಿ ಅವರು ಪಾದಯಾತ್ರೆ ಮಾಡಲಿ. ಪ್ರಧಾನಿ ಮೋದಿ ಕೂಡ ಒಂದು ರೋಡ್‌ ಶೋ ನಡೆಸಲಿ” ಎಂದು ಹೇಳಿದರು.

ರಾಜಕೀಯ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳು ದೂರವಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟ ಅವರು, “ಕಾಂಗ್ರೆಸ್ ಮತ್ತು ಸಿಪಿಐ(ಎಂ) ಕೂಡ ಹತ್ತಿರವಾಗಬಹುದು. ಭಿನ್ನಾಭಿಪ್ರಾಯಗಳು ಬದಲಾಗಬಹುದು. ಎಂ.ಎ. ಬೇಬಿ ಮತ್ತು ರಾಹುಲ್ ಗಾಂಧಿ ಒಂದೇ ವಾಹನದಲ್ಲಿ ಪ್ರಯಾಣಿಸುವುದು, ಎಂ.ಎ. ಬೇಬಿ ಮತ್ತು ಮಮತಾ ಬ್ಯಾನರ್ಜಿ ಪರಸ್ಪರ ಆತ್ಮೀಯವಾಗಿ ಮಾತನಾಡುವುದು ಇವೆಲ್ಲವೂ ಸಾಧ್ಯವಾಗಿದ್ದರೆ, ರಾಜಕೀಯದಲ್ಲಿ ಏನು ಬೇಕಾದರೂ ಸಾಧ್ಯ” ಎಂದು ಜಾನ್ ಬ್ರಿಟ್ಟಾಸ್ ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!