ಮಂಜೇಶ್ವರ ಇನ್ಫೆಂಟ್ ಜೀಸಸ್ ಶಾಲೆಯ 28ನೇ ವಾರ್ಷಿಕೋತ್ಸವ ಸಂಭ್ರಮ

​ಮಂಜೇಶ್ವರ: ಕಳೆದ ಇಪ್ಪತ್ತೆಂಟು ವರ್ಷಗಳಿಂದ ಮಂಜೇಶ್ವರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಹಾಗೂ ನಗರ ಪ್ರದೇಶದ ಮಕ್ಕಳಿಗೆ ಗುಣಮಟ್ಟದ, ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗುರುತನ್ನು ಮೂಡಿಸಿರುವ ಪ್ರತಿಷ್ಠಿತ ಮಂಜೇಶ್ವರ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ 2026-27ನೇ ಸಾಲಿನ 28ನೇ ಶಾಲಾ ವಾರ್ಷಿಕೋತ್ಸವವು ಅತ್ಯಂತ ಸಡಗರ, ಸಂಭ್ರಮ ಹಾಗೂ ಅಭೂತಪೂರ್ವ ಯಶಸ್ಸಿನೊಂದಿಗೆ ಜರುಗಿತು.

​ಶಾಲಾ ಆಡಳಿತ ಮಂಡಳಿಯ ದೂರದೃಷ್ಟಿಯ ನಾಯಕತ್ವ, ನಿರಂತರ ಪರಿಶ್ರಮ ಮತ್ತು ಸಮಾಜಮುಖಿ ಚಿಂತನೆಯ ಫಲವಾಗಿ ಇಂದು ಈ ಸಂಸ್ಥೆಯು ಜಿಲ್ಲೆಯಲ್ಲೇ ಅತ್ಯುತ್ತಮ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕೃತಿ, ಮಾನವೀಯ ಮೌಲ್ಯಗಳು ಮತ್ತು ಸೃಜನಶೀಲತೆಯನ್ನು ಬೆಳೆಸುವಲ್ಲಿ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದ ಪಾತ್ರ ಅನನ್ಯವಾದುದು. ಇದಕ್ಕೆ ಪೂರಕವಾಗಿ ಈ ಬಾರಿಯ ವಾರ್ಷಿಕೋತ್ಸವವನ್ನು “ಜ್ಞಾನ ಬೆಳೆದಂತೆ ಜೀವನದಲ್ಲಿ ಮೌಲ್ಯವನ್ನು ಗಳಿಸುವುದು” ಎಂಬ ಅರ್ಥಪೂರ್ಣ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗಿತ್ತು. ತಂದೆ-ತಾಯಿ ಹಾಗೂ ಗುರುಹಿರಿಯರನ್ನು ಗೌರವಿಸುವ ಉದಾತ್ತ ಸಂದೇಶವನ್ನು ಈ ಕಾರ್ಯಕ್ರಮವು ಸಮಾಜಕ್ಕೆ ಸಾರಿತು.

​ಶಾಲಾ ಮ್ಯಾನೇಜರ್ ವಂದನೀಯ ಗುರು ಎಡ್ವಿನ್ ಫ್ರಾನ್ಸಿಸ್ ಪಿಂಟೋ ಅವರ ಸಮರ್ಥ ಹಾಗೂ ದಕ್ಷ ಅಧ್ಯಕ್ಷತೆಯಲ್ಲಿ ನಡೆದ ಈ ಭವ್ಯ ಸಮಾರಂಭವನ್ನು ಮಂಗಳೂರು ಸರ್ಕಾರಿ ಕಾಲೇಜಿನ ನಿವೃತ್ತ ಅಧ್ಯಾಪಕ ಡಾ. ಎನ್. ಶಿವಪ್ರಕಾಶ್ ಮುಖ್ಯ ಅತಿಥಿಯಾಗಿ ಆಗಮಿಸಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಲೆಯ ಶೈಕ್ಷಣಿಕ ಪ್ರಗತಿ ಮತ್ತು ಆಡಳಿತ ಮಂಡಳಿಯ ಶಿಸ್ತುಬದ್ಧ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಡಾ. ಎನ್. ಶಿವಪ್ರಕಾಶ್ ಅವರು ಮಾತನಾಡಿ, (byt-1) ಮಕ್ಕಳ ಅಂಕಗಳನ್ನು ಮಾತ್ರ ನೋಡಿ ಅವರ ಸಾಮರ್ಥ್ಯವನ್ನಾಗಲಿ ಅಥವಾ ಶಾಲೆಯ ಗುಣಮಟ್ಟವನ್ನಾಗಲಿ ಅಳೆಯುವುದು ಸರಿಯಲ್ಲ. ಪ್ರತಿ ಮಗುವಿನಲ್ಲೂ ವಿಶಿಷ್ಟ ಪ್ರತಿಭೆ ಇರುತ್ತದೆ. ಮಕ್ಕಳು ಎಷ್ಟು ಕ್ರಿಯಾಶೀಲರಾಗಿದ್ದಾರೆ ಮತ್ತು ತಮ್ಮ ಟ್ಯಾಲೆಂಟ್ ಅನ್ನು ಎಷ್ಟು ಚೆನ್ನಾಗಿ ಪ್ರದರ್ಶಿಸುತ್ತಾರೆ ಎಂಬುದೇ ನಿಜಕ್ಕೂ ಮುಖ್ಯ. ಪರೀಕ್ಷೆಯ ಅಂಕಗಳಿಗಿಂತ ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ಅವರಲ್ಲಿರುವ ಕೌಶಲ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸುವುದೇ ನಿಜವಾದ ಶಿಕ್ಷಣದ ಉದ್ದೇಶವಾಗಿದೆ ಎಂದು ಹೇಳಿ ಸಮಾರಂಭಕ್ಕೆ ಶುಭ ಹಾರೈಸಿದರು.

ಗೌರವ ಅತಿಥಿಯಾಗಿ ಭಾಗವಹಿಸಿದ್ದ ಅಲ್ ಸಖಾಫ್ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲೆ ಮಿಸ್ಬಾ ಎ ಮಾತನಾಡಿ, ಸಂಸ್ಥೆಯ ಶೈಕ್ಷಣಿಕ ಗುಣಮಟ್ಟ ಮತ್ತು ಮಕ್ಕಳ ಪ್ರತಿಭಾ ವಿಕಾಸಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ಕೊಂಡಾಡುತ್ತಾ, (byt 2): ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರಲು ಇಲ್ಲಿ ನೀಡುತ್ತಿರುವ ಪ್ರೋತ್ಸಾಹ ಮಾದರಿಯಾಗಿದೆ. ವಿದ್ಯಾರ್ಥಿಗಳೇ, ಮೊದಲು ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ; ನಿಮ್ಮ ಸಾಮರ್ಥ್ಯವನ್ನು ನೀವು ಅರಿತುಕೊಂಡಾಗ ಮಾತ್ರ ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯ. ಸತತ ಪ್ರಯತ್ನ ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯಿರಿ, ಯಶಸ್ಸು ಖಂಡಿತ ನಿಮ್ಮದಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು.

​ಸಂಸ್ಥೆಯ ಬೆಳವಣಿಗೆಯ ಹಿಂದಿನ ಶಕ್ತಿಯಾಗಿರುವ ಶಾಲಾ ಮ್ಯಾನೇಜರ್ ವಂದನೀಯ ಗುರು ಎಡ್ವಿನ್ ಫ್ರಾನ್ಸಿಸ್ ಪಿಂಟೋ ಅವರು ಅಧ್ಯಕ್ಷೀಯ ಭಾಷಣ ಮಾಡಿ, (Bytes 3) ಇಂದಿನ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ಶಿಕ್ಷಣದ ಯುಗದಲ್ಲಿ ವಿಚಿತ್ರ ವೈರುದ್ಯವಿದೆ. ಅವಕಾಶಗಳು ಹೇರಳವಾಗಿದ್ದರೂ, ಬದುಕಿನ ಮೌಲ್ಯ ಕಲಿಸದ ಶಿಕ್ಷಣ ತನ್ನ ಮೂಲ ಉದ್ದೇಶದಲ್ಲಿ ಸೋಲುತ್ತದೆ. ಜ್ಞಾನದ ಜೊತೆಗೆ ಮಾನವೀಯತೆ ಮತ್ತು ಜೀವನ ಕೌಶಲ್ಯ ಬೆಳೆಸುವುದೇ ನಿಜವಾದ ಶಿಕ್ಷಣದ ಯಶಸ್ಸು ಎಂದು ಹೇಳಿ ಸಮಾರಂಭಕ್ಕೆ ಶುಭ ಹಾರೈಸಿದರು.

​ವೇದಿಕೆಯಲ್ಲಿ ಪಿ.ಪಿ.ಸಿ ಮಂಜೇಶ್ವರ ಚರ್ಚ್ ಉಪಾಧ್ಯಕ್ಷೆ ರೀನಾ ಮೊಂತೆರೋ, ಕಾರ್ಯದರ್ಶಿ ಜಯಶ್ರೀ ಮೊಂತೆರೋ ಹಾಗೂ ಪಿ.ಟಿ.ಎ ಉಪಾಧ್ಯಕ್ಷ ವಿಜಯ ಡಿಸೋಜ ಮೊದಲಾದ ಗಣ್ಯರು ಉಪಸ್ಥಿತರಿದ್ದು ಶಾಲೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಉಷಾ ಕಿರಣ್ ಅವರು ಶಾಲೆಯ ವರ್ಷವಿಡೀ ನಡೆದ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಸಾಧನೆಗಳ ಸಮಗ್ರ ವರದಿಯನ್ನು ಮಂಡಿಸಿದರು.

ಆಡಳಿತ ಮಂಡಳಿಯ ಪ್ರೋತ್ಸಾಹದಿಂದ ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಿಜ್ಞಾನ, ಕಲೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆಗೈದು ಸಂಸ್ಥೆಗೆ ಕೀರ್ತಿ ತಂದ ಪ್ರತಿಭಾನ್ವಿತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಳೆ ವಿದ್ಯಾರ್ಥಿಗಳು ಹಾಗೂ ಪರೀಕ್ಷೆಯಲ್ಲಿ ‘ಎ ಪ್ಲಸ್’ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ವಿಶೇಷವಾಗಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಾಡಗೀತೆ, ಸುಮಧುರ ಹಾಡುಗಳು, ಆಕರ್ಷಕ ನೃತ್ಯ, ಅರ್ಥಪೂರ್ಣ ನಾಟಕ ಹಾಗೂ ಸಾಂಪ್ರದಾಯಿಕ ಮಾಪ್ಪಿಳಪಾಟ್ ಮೊದಲಾದ ವೈವಿಧ್ಯಮಯ ಪ್ರದರ್ಶನಗಳು ನೆರೆದಿದ್ದ ಪೋಷಕರು ಮತ್ತು ಸಭಿಕರ ಮನಸೂರೆಗೊಂಡವು. ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ವಿದ್ಯಾರ್ಥಿಗಳೇ ಅತ್ಯಂತ ಆತ್ಮವಿಶ್ವಾಸದಿಂದ ನಿರೂಪಣೆಯನ್ನು ನಿರ್ವಹಿಸಿದ್ದು, ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಉತ್ತಮ ತರಬೇತಿಗೆ ಹಿಡಿದ ಕನ್ನಡಿಯಾಗಿತ್ತು.

​ಇನ್ಫೆಂಟ್ ಜೀಸಸ್ ಶಾಲೆಯು ಕೇವಲ ಒಂದು ವಿದ್ಯಾಸಂಸ್ಥೆಯಾಗಿ ಉಳಿಯದೆ, ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಒಂದು ಸುಂದರ ಕುಟುಂಬವಾಗಿ ಬೆಳೆದು ನಿಂತಿದೆ ಎಂಬುದಕ್ಕೆ ಈ ವಾರ್ಷಿಕೋತ್ಸವ ಸಾಕ್ಷಿಯಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಉಷಾಕಿರಣ್ ಸ್ವಾಗತಿಸಿ, ಸಿಸ್ಟರ್ ಎವ್ಜಿನ್ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!