ಜಾನಪದ ಕಂಬಳ ಟೀಕೆ ಟಿಪ್ಪಣಿಗಳಿಗೆ ಮುನ್ನುಡಿಯನ್ನು ಬರೆಯದಿರಲಿ , ಇತಿಹಾಸದ “ಅಸ್ಮಿತೆಯನ್ನು” ಕಾಪಾಡುವಂತಾಗಲಿ… !

ಮಂಗಳೂರು: ಕಂಬಳ ಈ ನಾಡಿನ ಪರಂಪರಾಗತವಾದ ಜಾನಪದ ಕ್ರೀಡೆ . ಇದು ಕರಾವಳಿ ಜನರ ನಾಡಿಮಿಡಿತದ ಪ್ರತಿಧ್ವನಿ . ಇದರ ಆಚರಣೆಗೆ ಅದರದ್ದೇ ಆದ ನೀತಿ ನಿಯಮಗಳಿವೆ. ಇಂಥಹಾ ಪರಂಪರಾಗತ ಕಂಬಳದ ಉಳಿವಿಗಾಗಿ ಅದೆಷ್ಟೋ ತೌಳವ ನಾಡಿದ ಮಹನೀಯರು ಶ್ರಮವನ್ನು ಪಟ್ಟಿದ್ದಾರೆ . ಆ ಸಾಲಿನಲ್ಲಿ ಅಗ್ರಗಣ್ಯರು, ಕಂಬಳದ ಭೀಷ್ಮ ಖ್ಯಾತಿಯ ಗುಣಪಾಲ ಕಡಂಬರು ಕೂಡ ಒಬ್ಬರು ಎನ್ನುವ ಸಂಗತಿ ಸರ್ವರಲ್ಲಿಯೂ ಜಗತ್ ಜಾಹಿರ. ಇತ್ತೀಚಿಗೆ ನಡೆದ ಕೆಲವು ಘಟನೆಗಳು ಕಂಬಳದ ಆಚರಣೆಗೆ ಧಕ್ಕೆಯನ್ನು ತಂದಿತೇ ಎನ್ನುವ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ .

ಕಳೆದ ಶನಿವಾರ ಮಂಗಳೂರು ಕಂಬಳ ಸಮಿತಿ ವತಿಯಿಂದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ಕಂಬಳವನ್ನು ಆಯೋಜನೆ ಮಾಡಲಾಗಿತ್ತು . ಅದು ಯಶಸ್ವಿ ಕೂಡ ಆಗಿತ್ತು .ಅನೇಕ ಪ್ರಖ್ಯಾತರ ಬಾಯಿಯಿಂದಲೂ ಮೆಚ್ಚುಗೆಗೆ ಮಾತ್ರವಾಗಿತ್ತು . ಆದರೆ ಅಲ್ಲಿ ನಡೆದ ಕೆಲವು ಇರುಸು ಮುರುಸು ಘಟನೆಗಳು ಆ ಕಂಬಳಕ್ಕೆ ಮಾತ್ರ ಸೀಮಿತವಾಗದೆ ಕಂಬಳ ಇತಿಹಾಸಕ್ಕೂ ಪೆಟ್ಟು ನೀಡುವಂತಿತ್ತು .

ಅರುಣ್ ಶೆಟ್ಟಿ ಬಜ್ಪೆ ಎಂಬುವವರು ಹಿರಿಯ ತೀರ್ಪುಗಾರರಾದ ಗುಣಪಾಲ ಕಡಂಬರಿಗೆ ವೇದಿಕೆಯಲ್ಲೇ ಅವಮಾನ ಮಾಡಿರುವ ಘಟನೆ ಮತ್ತು ರಾಜ್ಯ ಕಂಬಳ ಸಮಿತಿಯ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು ಎಂಬುವವರು ಗುಣಪಾಲ ಕಡಂಬರಿಗೆ ಏಕವಚನದಿಂದ ನಿಂದನೆ ಮಾಡಿರುವ ಕ್ರಮ ಸರಿಯಲ್ಲ ಎಂಬುದಾಗಿ ಸಾಮಾಜಿಕ ಮಾಧ್ಯಮದಲ್ಲಿ ನಾನಾ ಚರ್ಚೆಗೆ ಕಾರಣವಾಗುತ್ತಿದೆ . ಇದು ಕಂಬಳದ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ ಗುಣಪಾಲ ಕಡಂಬರಿಗೆ ಮಾಡಿದ ಅಪಮಾನ ಎಂದು ಕಂಬಳ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ . ಈ ಬೆಳವಣಿಗೆಯು ಕಂಬಳ ಅಭಿಮಾನಿಗಳ ಕೆಂಗಣ್ಣಿಗೂ ಕಾರಣವಾಗಿದಂತೂ ಸ್ಪಷ್ಟವಾಗಿ ಕಾಣುತ್ತದೆ .

ಕಂಬಳದಲ್ಲಿ ಶಿಸ್ತು , ಪರಸ್ಪರ ಗೌರವ , ಹೆಚ್ಚಿನ ಮನ್ನಣೆಯನ್ನು ನೀಡಲಾಗುತ್ತದೆ . ಮುಂದೆ ಕಂಬಳದಲ್ಲಿ ಈ ರೀತಿಯ ಘಟನೆಗಳ ಪುನರಾವರ್ತನೆಗೆ ಆಸ್ಪದವನ್ನು ನೀಡಬಾರದು . ಈ ರೀತಿಯ ಘಟನೆ ಕಂಬಳಕ್ಕೆ ಭೂಷಣ ಅಲ್ಲ . ಇದರಿಂದ ಪರಂಪರೆಗೆ ಧಕ್ಕೆಯನ್ನು ತರುತ್ತದೆ ಈ ಹಿಂದೆ ನಡೆದ ತಪ್ಪು ಮತ್ತೆ ಮರುಕಳಿಸಬಾರದು . ಕಂಬಳ ಕೂಟವು ಸಂಪ್ರದಾಯ ಆಚರಣೆಗಳಿಗೆ ಕೈಗನ್ನಡಿಯನ್ನು ಹಿಡಿಯಲಿ ಅದು ಟೀಕೆ ಟಿಪ್ಪಣಿಗಳಿಗೆ ಮುನ್ನುಡಿಯನ್ನು ಬರೆಯದಿರಲ್ಲಿ . ಶಿಸ್ತಿನ ಕಂಬಳ ಎನ್ನುವ ಹಣೆ ಪಟ್ಟಿ ಎಂದೂ ಬೀಳದಿರಲಿ .

✍🏻✍🏻ಗಿರೀಶ್ ಪಿ ಎಂ ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!