ಪುತ್ತೂರು: ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದನ್ನು ಖಂಡಿಸಿ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆಯಿಂದ ಜು.25ರಂದು ಬೆಳಿಗ್ಗೆ 11.30ಕ್ಕೆ ಬಸ್ ನಿಲ್ದಾಣದ ಬಳಿಯ ಗಾಂಧೀಕಟ್ಟೆಯಿಂದ ಅಮರ್ ಜವಾನ್ ಜ್ಯೋತಿ ತನಕ ಶಾಂತಿಯುತ ಜಾಥಾ ನಡೆಯಲಿದೆ ಎಂದು ವಿದ್ಯಾರ್ಥಿ ಹಿತ ರಕ್ಷಣಾ ವೇದಿಕೆ ಸಂಚಾಲಕ ಬಾತೀಷ ಅಳಕೆಮಜಲು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದನ್ನು ಖಂಡಿಸಿ, ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ 20 ದಿನಗಳಿಂದ ವಿದ್ಯಾರ್ಥಿಗಳು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಈ ತನಕ ಯಾವುದೇ ಸಚಿವರಾಗಲಿ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ನೀಟ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿರುವುದು ಇದೇನು ಮೊದಲಲ್ಲ. ಹಲವು ಬಾರಿ ಇದೇ ರೀತಿ ಸೋರಿಕೆಯಾಗಿದ್ದು ಅದೆಷ್ಟೋ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೋಡುವವರಿಗೆ ಇದೊಂದು ಸಣ್ಣ ವಿಚಾರವಾಗಿರಬಹುದು.

ಅದು ನೀಟ್ ಪರೀಕ್ಷೆ ಕೇವಲ ಪರೀಕ್ಷೆಯಲ್ಲ. ಅದರಲ್ಲಿ ವಿದ್ಯಾರ್ಥಿಗಳ ಬಹಳಷ್ಟು ಶ್ರಮವಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಹಾನಿಯುಂಟಾಗಿದೆ ಎಂದರು. ಶ್ರೀಮಂತರ, ಬಂಡವಾಳ ಶಾಹಿಗಳ ಪ್ರಭಾವದಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವುದನ್ನು ನಿಯಂತ್ರಿಸಲು ಹಿಂದಿನ ಸರಕಾರ ನೀಟ್ ಪರೀಕ್ಷೆಯನ್ನು ಜಾರಿ ಮಾಡಿತ್ತು. ಇದರಿಂದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉನ್ನತ ಮಟ್ಟದ ವಿದ್ಯಾಭ್ಯಾಸ ಪಡೆದು ವೈದ್ಯರಾಗಲು, ದೇಶದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಹಕಾರಿಯಾಗಿತ್ತು. ನೀಟ್ ಪರೀಕ್ಷೆಯು ಬಹಳಷ್ಟು ಕ್ಲಿಷ್ಟಕರವಾದುದು.

ಇದರಲ್ಲಿ ವಿದ್ಯಾರ್ಥಿಗಳ ಪಿಯುಸಿ ನಂತರ ಒಂದೆರೆಡು ವರ್ಷಗಳ ಕಠಿಣ ಶ್ರಮವಿದೆ. ಇಂತಹ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವುದು ಸಣ್ಣ ತಪ್ಪೇನಲ್ಲ. ಅದು ಬಹುದೊಡ್ಡ ತಪ್ಪು. ಅದೂ ಮತ್ತೆ ಮತ್ತೆ ಸೋರಿಯಾಗುತ್ತಿರುವ ಅಕ್ರಮವನ್ನು ಖಂಡಿಸಲೇಬೇಕು. 20 ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುತ್ತಿರುವುದು ದೇಶದ ಪ್ರತಿಯೊಬ್ಬರೂ ಖಂಡಿಸಲೇಬೇಕು ಎಂದು ಹೇಳಿದರು.

ಜಾಥಾದ ಬಗ್ಗೆ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಬಗ್ಗೆ ಅರಿವು ಮೂಡಿಸಲಾಗಿದೆ. ಜಾಥಾದಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಲಾಗಿದೆ. ಜಿಲ್ಲೆಯ ವಿವಿಧ ತಾಲೂಕಿಗಳಿಂದ ವಿದ್ಯಾರ್ಥಿ ನಾಯಕರು ಸೇರಿದಂತೆ 500-600ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಭಾತಿಷ ಅಳಕೆಮಜಲು ಹೇಳಿದರು. ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಯಾಸ್ಟರ್ನ್ ಫೆರ್ನಾಂಡೀಸ್, ಶಮೀನ್ ಮುಕ್ವೆ, ಹ್ಯಾರೀಸ್ ದರ್ಬೆ ಹಾಗೂ ಮುನೀಫ್ ನೆಟ್ಟಾರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


