ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನೇ ಹಾಳುಗೆಡಹುತ್ತಿದ್ದು,ಅದರ ಪರಿಣಾಮ ಇಡೀ ಭೂಮಂಡಲದ ಮೇಲೆ ಬೀರುತ್ತಿದೆ.ಉಳ್ಳವರ ಸ್ವಾರ್ಥಲಾಲಸೆಗಾಗಿ ಇಡೀ ಪರಿಸರವನ್ನೇ ಬಲಿಕೊಡಲಾಗುತ್ತಿದೆ.ಇಂತಹ ಸಂದರ್ಭದಲ್ಲಿ ಎಳೆಯ ಮನಸುಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿದಾಗ ಮಾತ್ರವೇ ಭವಿಷ್ಯತ್ತಿನಲ್ಲಿ ಸ್ವಚ್ಛ ಪರಿಸರ ನಿರ್ಮಾಣಗೊಳ್ಳಲು ಸಾಧ್ಯ ಎಂದು ಜೆಪ್ಪು ಸಂತ ಜೆರೋಸಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪೂಜ್ಯನೀಯ ಸಿಸ್ಟರ್ ಅರ್ಪಿತಾರವರು ಅಭಿಪ್ರಾಯಪಟ್ಟರು.
ಅವರು ಚಿಣ್ಣರ ಚಾವಡಿ ಮಂಗಳೂರು ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜೆಪ್ಪು ಸಂತ ಜೆರೋಸಾ ಫ್ರೌಢಶಾಲೆಯಲ್ಲಿ ಜರುಗಿದ ಗಿಡ ಬೆಳೆಸೋಣ,ನಾಡು ಉಳಿಸೋಣ ಎಂಬ ಧ್ಯೇಯವಾಕ್ಯದೊಂದಿಗೆ ಮಕ್ಕಳಿಗೆ ಗಿಡ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಈ ಮಾತುಗಳನ್ನು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚಿಣ್ಣರ ಚಾವಡಿ ಮಂಗಳೂರು ಇದರ ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್ ರವರು, ಪ್ರತಿಯೊಬ್ಬರೂ ಒಂದೊಂದು ಗಿಡ ನೆಡುವ ಮೂಲಕ ಸಾವಿರ ಜೀವಗಳನ್ನು ಉಳಿಸಲು ಸಾಧ್ಯವಾಗಬೇಕು.ಆ ಮೂಲಕ ಹಸಿರು ಪರಿಸರ ನಿರ್ಮಾಣಕ್ಕೆ ತಮ್ಮ ಬದ್ದತೆಯನ್ನು ವ್ಯಕ್ತಪಡಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಮುಖರಾದ ಅಸುಂತ ಡಿಸೋಜ,ಮರ್ಲಿನ್ ರೇಗೋ, ಫ್ಲೇವಿಕ್ರಾಸ್ತಾ ಅತ್ತಾವರ, ಯುವಜನ ನಾಯಕರಾದ ಜಗದೀಶ್ ಬಜಾಲ್,ಚಿಣ್ಣರ ಚಾವಡಿ ಅಧ್ಯಕ್ಷರಾದ ಆಡ್ಲಿನ್ ಸಿಕ್ವೇರಾ, ಕಾರ್ಯದರ್ಶಿ ಸಂಗಮೇಶ್,ಇತರ ನಾಯಕರಾದ ವಿಶಾಗಾ,ಇಯೋನ್ನಾ,ಮೌಲ್ಯ ಮುಂತಾದವರು ಉಪಸ್ಥಿತರಿದ್ದರು.ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ವಿವಿಧ ರೀತಿಯ ಗಿಡಗಳನ್ನು ವಿತರಿಸಲಾಯಿತು.
ವಂದನೆಗಳೊಂದಿಗೆ
ಸುನಿಲ್ ಕುಮಾರ್ ಬಜಾಲ್
ಸಂಚಾಲಕರು,ಚಿಣ್ಣರ ಚಾವಡಿ ಮಂಗಳೂರು